ತುಮಕೂರು ಜಿಲ್ಲೆಯಲ್ಲಿ ಒಟ್ಟು 57 ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ 18 ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳನ್ನಾಗಿ ಮಾರ್ಪಡಿಸಲಾಗಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ತಿಳಿಸಿದರು
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ 3ನೇ ತ್ರೖಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಕೊರಟಗೆರೆ ತಾಲ್ಲೂಕಿನ ಅನುಪಲು, ಬಿ.ಎಂ.ಪಾಳ್ಯ, ಪಕ್ಕಿರಪ್ಪನ ಪಾಳ್ಯ, ಗೊಂದಿಹಳ್ಳಿ ಪ್ಲಾಂಟೇಷನ್, ಭದ್ರಯ್ಯನಪಾಳ್ಯ, ಹನುಮಂತಗಿರಿ; ತಿಪಟೂರು ತಾಲ್ಲೂಕಿನ ತಿಮ್ಲಾಪುರ, ಹುಣಸೇಘಟ್ಟ, ಮಾನವನಘಟ್ಟ, ಬೀರಸಂದ್ರ, ರಾಮಚಂದ್ರಪುರ, ಗಂಗನಘಟ್ಟ; ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬಿಳಿಕಲ್ಲು ಗೊಲ್ಲರಹಟ್ಟಿ, ವಡ್ಡೇರಹಳ್ಳಿ, ಬಂಗಾರಗೆರೆ ಪಾಳ್ಯ, ದುರ್ಗದ ಸೀಮೆ ಪಾಳ್ಯ, ಎಂ.ಜಿ.ಪಾಳ್ಯ ಹಾಗೂ ಅಡಾಣೆ ಕಲ್ಲು ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳನ್ನಾಗಿ ಮಾರ್ಪಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಒಟ್ಟು 57 ಗ್ರಾಮಗಳನ್ನು ತಾಲ್ಲೂಕು ತಂಬಾಕು ಮುಕ್ತ ಗ್ರಾಮಗಳನ್ನಾಗಿ ಮಾರ್ಪಡಿಸಲು ಯೋಜನೆ ರೂಪಿಸಿದ್ದು, ಸದರಿ ಗ್ರಾಮಗಳಲ್ಲಿ ತಂಬಾಕು ದುಷ್ಪರಿಣಾಮಗಳು ಕೋಟ್ಪಾ ಕಾಯ್ದೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಈ ಕಾರ್ಯಕ್ರಮದ ಬಗ್ಗೆ ಹಲವಾರು ಗ್ರಾಮಗಳನ್ನು ಪಂಚಾಯತ್ ರಾಜ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಕಾರ್ಯಯೋಜನೆ ರೂಪಿಸಿ ಈ ಪೈಕಿ ಜಿಲ್ಲೆಯಲ್ಲಿ 57 ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ತಂಬಾಕು ಉತ್ಪನ್ನ ಹಾಗೂ ಕಾಯ್ದೆಯ ಕುರಿತು ಜಾಗೃತಿ ಮೂಡಿಸುವ ಮೂಲಕ ಸಾರ್ವಜನಿಕರ ಸಹಕಾರದೊಂದಿಗೆ ತಂಬಾಕು ಮುಕ್ತ ಗ್ರಾಮಗಳನ್ನಾಗಿ ಘೋಷಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಶಾರದಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ದಿನೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.





