ತುಮಕೂರಿನ ಟೌನ್ ಹಾಲ್ ನಲ್ಲಿ ಎಐಡಿಎಸ್ಒ ಜಿಲ್ಲಾ ಸಮಿತಿಯಿಂದ ಆಯೋಜಿಸಿದ್ದ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ಜಿಲ್ಲಾ ಮಟ್ಟದ ಪ್ರತಿಭಟನಾ ಸಮಾವೇಶದಲ್ಲಿ ಸುಮಾರು 40 ಹಳ್ಳಿಗಳನ್ನು ಪ್ರತಿನಿಧಿಸುತ್ತಾ 450ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ, ಬಾ.ಹ.ರಾಮಕುಮಾರಿ ಮಾತನಾಡಿ “ಈಗ ಜ್ಯೋತಿಬಾ ಫುಲೆ- ಸಾವಿತ್ರಿಬಾಯಿ ಫುಲೆ ಯವರಿಗೆ ಕಾಯುವುದು ಬೇಡ. ಕೆಪಿಎಸ್ ಮ್ಯಾಗ್ನೆಟ್ ವಿರುದ್ಧ ಹೋರಾಟ ತೀವ್ರಗೊಳಿಸೋಣ. ಒಂದು ಊರೆಂದರೆ, ಒಂದು ಶಾಲೆ. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.” ಎಂದು ಕರೆ ನೀಡಿದರು.
ಎಐಡಿಎಸ್ಓ ನ ರಾಜ್ಯಾಧ್ಯಕ್ಷೆ ಅಶ್ವಿನಿ. ಕೆ.ಎಸ್ ಮಾತನಾಡಿ ” ಕೆಪಿಎಸ್ ಮ್ಯಾಗ್ನೆಟ್ ಯೋಜನೆಗಾಗಿ, ಸರ್ಕಾರ, ಏಷಿಯನ್ ಡೆವಲಪ್ಮೆಂಟ್ ಬ್ಯಾಂಕಿನಿಂದ 2.5ಸಾವಿರ ಕೋಟಿ ಸಾಲ ತೆಗೆದುಕೊಂಡು, ಬಡ ರೈತ-ಕಾರ್ಮಿಕರ ಮಕ್ಕಳನ್ನು ಬೀದಿಗೆ ತಳ್ಳುತ್ತಿದೆ. ಇವರುಗಳಿಂದ ಶಿಕ್ಷಣವನ್ನು ಕಸಿದುಕೊಳ್ಳುವ ಮೂಲಕ, ಹಿಂದಿನ ಕಾಲಕ್ಕೆ, ಅದೇ ಅಂಧಕಾರಕ್ಕೆ ತಳ್ಳುತ್ತಿದೆ. ಸರ್ಕಾರ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕೊಡುತ್ತಿಲ್ಲ. 21 ಸಾವಿರ ಶಾಲೆಗಳು ರಾಜ್ಯದಲ್ಲಿ ದುರಸ್ತಿಗೆ ಕಾದುಕುಳಿತಿವೆ ಹಾಗೂ 7ಸಾವಿರ ಶಾಲೆಗಳು ಏಕೋಪಾಧ್ಯಯ ಶಾಲೆಗಳಿವೆ; ಮೊದಲಿಗೆ ಇವುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮತ್ತು ಶಿಕ್ಷಕರನ್ನು ನೇಮಿಸಿಕೊಳ್ಳುವ ಕೆಲಸವನ್ನು ಮಾಡಬೇಕು. ಸರ್ಕಾರ ತನ್ನ ಬಜೆಟ್ ನಲ್ಲಿ 30 ರಷ್ಟು ಶಿಕ್ಷಣಕ್ಕೆ ಇಡಬೇಕು. ಅಂತಿಮವಾಗಿ, ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ನೀಡಬೇಕು, ನಮ್ಮ ಶಾಲೆ ಉಳಿಸಬೇಕು, ಉತ್ತಮ ಶಿಕ್ಷಣ ನೀಡಬೇಕು ಇದೇ ನಮ್ಮ ಹೋರಾಟದ ಉದ್ದೇಶವೆಂದು” ಹೇಳಿದರು.

ಹಿರಿಯ ಹೋರಾಟಗಾರ ಯತಿರಾಜು ಮಾತನಾಡಿ, “ಎಲ್ಲಾ ಸರ್ಕಾರಿ ಶಾಲೆಗಳಿಗೆ ಬೇಕಿರುವುದು ಸಮಾನ ಗುಣಮಟ್ಟದ ಶಿಕ್ಷಣ. ಆದರೆ ಕೆಪಿಎಸ್ ಮ್ಯಾಗ್ನೆಟ್ ಯೋಜನೆ, ಬಡವರಿಂದ ಮಾತ್ರವಲ್ಲದೆ, ಮೇಲ ಮಧ್ಯಮ ವರ್ಗದಿಂದಲೂ ಶಿಕ್ಷಣವನ್ನು ಕಸಿಯುವ ಹುನ್ನಾರ ನಡೆಸಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎಐಡಿಎಸ್ಓ ರಾಜ್ಯ ಉಪಾಧ್ಯಕ್ಷೆ ಅಪೂರ್ವ ಮಾತನಾಡಿ, “ರೈತ-ಕಾರ್ಮಿಕರ ಮಕ್ಕಳಿಗೆ ಸಹಾಯವಾಗಲೆಂದು, ಪ್ರತಿಯೊಂದು ಹಳ್ಳಿಯಲ್ಲಿ ಶಾಲೆ ತೆರೆದಿದ್ದು. ಆದರೆ ಇಂದು ‘ಗುಣಮಟ್ಟದ ಶಿಕ್ಷಣ’ ಎಂಬ ಹೆಸರಲ್ಲಿ, ಗ್ರಾಮ ಪಂಚಾಯಿತಿಗೆ ಒಂದು ಕೆಪಿಎಸ್-ಮ್ಯಾಗ್ನೆಟ್ ಶಾಲೆ ಮಾಡುವುದರ ಮೂಲಕ, ಇದೇ ಮಕ್ಕಳ ಶಿಕ್ಷಣ ಕಸಿದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ನಮ್ಮ ಹೋರಾಟ, ಒಂದೆರಡು ವರ್ಷಗಳೇ ನಡೆಯಬಹುದು; ಇದಕ್ಕೆ ನಾವು ಶತಸಿದ್ಧ! ಈ ಯೋಜನೆಯನ್ನು ನಾವು ಹಿಮ್ಮೆಟಿಸಿಯೇ ತೀರುತ್ತೇವೆ” ಎಂದು ಗುಡುಗಿದರು.

ಸಮಾವೇಶದ ಕೊನೆಯ ಭಾಗದಲ್ಲಿ, 92 ಜನರ ಜಿಲ್ಲಾ ಮಟ್ಟದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚನೆಗೊಂಡಿತು. ಸಮಾವೇಶದ ಅಧ್ಯಕ್ಷತೆಯನ್ನು ಎಐಡಿಎಸ್‌ಓ ತುಮಕೂರು ಜಿಲ್ಲಾ ಕಾರ್ಯದರ್ಶಿಗಳಾದ ಲಕ್ಕಪ್ಪ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಸಮಿತಿಯ ಮುಖಂಡರು ಹಾಗೂ ಗ್ರಾಮಸ್ತರು, ಎಐಡಿಎಸ್‌ಓ ನ ಕಾರ್ಯಕರ್ತರಾದ ಭರತ್, ಸೈಯದ್, ವೃಷಭ್, ಸಂದೀಪ್, ಹುಸೇನಪ್ಪ, ಭೂತೇಶ ಉಪಸ್ಥಿತರಿದ್ದರು.
ಸರ್ಕಾರವು ಯೋಜನೆಯನ್ನು ಹಿಂಪಡೆದು ಅಧಿಕೃತವಾಗಿ ಆದೇಶ ಹೊರಡಿಸುವವರೆಗೂ ಈ ಹೋರಾಟ ಮುಂದುವರೆಯುತ್ತದೆ. ಹಾಗೂ ಜಿಲ್ಲೆಯ ಮೂಲೆ ಮೂಲೆಗೂ ಪ್ರತಿರೋಧ ಚಳುವಳಿಯು ಹರಡುತ್ತದೆ, ಎಂಬ ದೃಢ ಸಂಕಲ್ಪದೊಂದಿಗೆ ಸಮಾವೇಶವು ಮುಕ್ತಾಯವಾಯಿತು.





