ಒಳಮೀಸಲಾತಿ ಇಲ್ಲವಾದಲ್ಲಿ ಬಾಬು ಜಗಜೀವನ ರಾಮ್ ಪ್ರಶಸ್ತಿ ಹಿಂದುರುಗಿಸುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತುಮಕೂರು ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಕುಂದೂರು ತಿಮ್ಮಯ್ಯ ಅವರ ಸಾಮಾಜಿಕ ಸೇವೆ ಗುರುತಿಸಿ ಕರ್ನಾಟಕ ಸರ್ಕಾರ 2023ನೇ ಸಾಲಿನಲ್ಲಿ ‘ಬಾಬು ಜಗಜೀವನರಾಮ್ ರಾಜ್ಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತ್ತು. ಪ್ರಸ್ತುತ ಒಳ ಮೀಸಲಾತಿ ಹೋರಾಟ ತೀವ್ರವಾಗುತ್ತಿದೆ. ಇದೇ ತಿಂಗಳ 12ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟವನ್ನು ರೂಪಿಸಲಾಗಿದೆ. ಈ ಸಂದರ್ಭದಲ್ಲಿ ಕುಂದೂರು ತಿಮ್ಮಯ್ಯ ಅವರ ಬಹಿರಂಗ ಪತ್ರ ಹೋರಾಟದ ಕಿಚ್ಚು ಪ್ರಶಸ್ತಿ ಹಿಂದುರುಗಿಸುವವರೆಗೂ ಹೋಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಬಹಿರಂಗ ಪತ್ರದಲ್ಲಿ ಏನಿದೆ?
“ನನ್ನ ಸಾಮಾಜಿಕ ಸೇವೆ ಗುರುತಿಸಿ 2023ನೇ ಸಾಲಿನಲ್ಲಿ ‘ಬಾಬು ಜಗಜೀವನರಾಮ್ ರಾಜ್ಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಿರುತ್ತೀರಿ. ನನಗೆ ಇದರಿಂದ ಅತೀವ ಸಂತೋಷವಾಗಿರುತ್ತದೆ. ಐವತ್ತು ವರ್ಷದ ನನ್ನ ಸಂಘರ್ಷದ ಬದುಕು ಸಾರ್ಥಕವೆನಿಸಿತ್ತು. ಪ್ರಶಸ್ತಿ ಪ್ರದಾನ ಮಾಡಿ ಅಂದು ತಾವು “ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವುದಾಗಿ, ಒಳಮೀಸಲಾತಿಯನ್ನು ಜಾರಿಗೊಳಿಸಿಯೇ ತೀರುವುದಾಗಿ” ಆಡಿದ ಮಾತು ಇನ್ನೂ ಕಿವಿಯಲ್ಲಿ ಗುಯ್‌ಗುಡುತ್ತಿದೆ. ಸುಪ್ರೀಮ್ ಕೋರ್ಟ್ ತೀರ್ಪು ಬಂದ ನಂತರವೂ, ತಾವೇ ರಚಿಸಿದ ನ್ಯಾಯಮೂರ್ತಿ ನಾಗಮೋಹನ್ ದಾಸ್‌ರ ವರದಿ ಬಂದು ಒಳಮೀಸಲು ಹಂಚಿಕೆಯ ಶಿಫಾರಸು ಮಾಡಿದ ನಂತರವೂ, ಸಮಿತಿ, ಉಪಸಮಿತಿ, ಕ್ಯಾಬಿನೆಟ್ ತೀರ್ಮಾನ ಎಲ್ಲ ಮುಗಿದರೂ ಒಂದಲ್ಲ ಒಂದು ಅನಗತ್ಯ ಹೊಸ ಸಮಸ್ಯೆ ಸೃಷ್ಟಿಸಿಕೊಂಡು ಒಳಮೀಸಲು ಅನುಷ್ಠಾನ ಮುಂದೂಡುತ್ತಲೇ ಬರುತ್ತಿರುವುದು ಖಂಡನೀಯವಾಗಿರುತ್ತದೆ” ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: ತುಮಕೂರು | ನೇಮಕಾತಿಯಲ್ಲಿ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ
ಸದರಿ ಶೇ.15ರ ಹಳೆ ಮೀಸಲು ನಿಯಮದಂತೆ 56,000 ಹುದ್ದೆಗಳನ್ನು ಒಳಮೀಸಲು ಇಲ್ಲದೆ ಭರ್ತಿ ಮಾಡಿಕೊಳ್ಳಲು ಮುಂದಾಗಿರುವುದು ನೋವಿನ ಸಂಗತಿ ಮಾತ್ರವಾಗಿರದೆ, ನಾವುಗಳೆಲ್ಲ ತಮ್ಮ ಹಾಗೂ ತಮ್ಮ ಸಾಮಾಜಿಕ ನ್ಯಾಯದ ಮೇಲೆ ಇಟ್ಟಿರುವ ನಂಬಿಕೆಯು ಬುಡಮೇಲಾಗುತ್ತಿರುವ ಸಂದರ್ಭ ಇದಾಗಿದೆ. ಆದ್ದರಿಂದ ವೈಜ್ಞಾನಿಕವಾದ ಅಂಕಿ ಅಂಶಗಳೇ ಹೇಳುತ್ತಿರುವಂತೆ ಅತ್ಯಂತ ಹಿಂದುಳಿದ ಅಲೆಮಾರಿ ಮತ್ತು ಮಾದಿಗ ಸಮುದಾಯಕ್ಕೆ ಪ್ರತ್ಯೇಕವಾಗಿ ಶೇಕಡ 1 ಹಾಗೂ 6 ರಷ್ಟು ಒಳಮೀಸಲಾತಿ ನೀಡದೆ ಯಾವುದೇ ನೇಮಕಾತಿಯನ್ನು ಮುಂದುವರೆಸುವುದೇ ಆದರೆ ತಾವು ಆಶ್ವಾಸನೆ ಇಟ್ಟು ನೀಡಿದ ಪ್ರಶಸ್ತಿಯನ್ನು ಮುಡಿಗೇರಿಸಿ ತಿರುಗಾಡುವುದರಲ್ಲಿ ನನಗೆ ಯಾವುದೇ ಅರ್ಥ ಕಾಣುತ್ತಿಲ್ಲ. ಸಮುದಾಯದ ಹಿತವೇ ವೈಯಕ್ತಿಕ ಹಿತವೂ ಆಗಿದೆ. ಇದೇ ಮಾರ್ಚ್ 12ರಂದು ನಡೆಯುವ ತಮ್ಮ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ‘ಬಾಬು ಜಗಜೀವನ ರಾಮ್ ರಾಜ್ಯ ಪ್ರಶಸ್ತಿಯನ್ನು’ ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ನೋವಿನಿಂದ ಈ ಪತ್ರ ಬರೆಯುತ್ತಿದ್ದೇನೆ” ಎಂದು ಹೇಳಿದ್ದಾರೆ.





