ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಧನ ಧಾನ್ಯ ಕೃಷಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಜಿಲ್ಲೆಯ ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪ್ರಭಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಧಾನಮಂತ್ರಿ ಧನ ಧಾನ್ಯ ಕೃಷಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಯೋಜನೆಯು ರೈತರ ಉತ್ಪಾದಕತೆ ಹೆಚ್ಚಿಸುವುದರ ಜೊತೆಗೆ, ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಯೋಜನೆಯಡಿ ಕೈಗೊಳ್ಳಲಾಗಿರುವ ಕಾರ್ಯಗಳ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿದ ಅವರು, ಯೋಜನೆಯ ಲಾಭ ನೇರವಾಗಿ ಫಲಾನುಭವಿಗಳಿಗೆ ತಲುಪುವಂತೆ ಜಾಗ್ರತೆ ವಹಿಸುವಂತೆ ತಿಳಿಸಿದರು. ಯಾವುದೇ ಹಂತದಲ್ಲಿ ವಿಳಂಬ ಅಥವಾ ನಿರ್ಲಕ್ಷö್ಯ ನಡೆಯದಂತೆ ಅಧಿಕಾರಿಗಳು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು ಎಂದು ಎಚ್ಚರಿಸಿದರು.
ಯೋಜನೆಯಡಿ ರೈತರಿಗೆ ಗುಣಮಟ್ಟದ ಬೀಜ, ರಸಗೊಬ್ಬರ, ತಾಂತ್ರಿಕ ಮಾರ್ಗದರ್ಶನ, ನೀರಾವರಿ ಸೌಲಭ್ಯ ಹಾಗೂ ಮಾರುಕಟ್ಟೆ ಸಂಪರ್ಕ ಒದಗಿಸುವ ಅಂಶಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಹೇಳಿದರು. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನಾ ಇಲಾಖೆ ಸೇರಿದಂತೆ ಸಂಬAಧಿಸಿದ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಸಾಧಿಸಲು ಈ ಯೋಜನೆ ಪ್ರಮುಖವಾಗಿದೆ. ಆದ್ದರಿಂದ ಅಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ನಿಗಾ ವಹಿಸಿ, ರೈತರೊಂದಿಗೆ ನೇರ ಸಂಪರ್ಕ ಹೊಂದಿ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.





