ಗಾಂಧಿ ಹುತ್ಮಾತ ದಿನಾಚರಣೆ ಕೇವಲ ದಿನಾಚರಣೆಯಲ್ಲ ಒಂದು ಎಚ್ಚರದ ದಿನ ಗಾಂಧಿ ಒಬ್ಬ ವ್ಯಕ್ತಿಯಲ್ಲ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಇಡೀ ಜಗತ್ತಿನ ಆಸ್ತಿ ಮಹಾತ್ಮ ಗಾಂಧೀಜಿ ಎಂದು ಚಿಂತಕ ಪ್ರೊ. ಕೆ.ದೊರೆರಾಜ್ ಅಭಿಪ್ರಾಯಪಟ್ಟರು
ತುಮಕೂರು ನಗರದ ಸ್ವಾತಂತ್ರ್ಯ ಚೌಕದಲ್ಲಿ ಸೌಹಾರ್ದ ಕರ್ನಾಟಕ, ಸೌಹಾರ್ದ ತುಮಕೂರು ಹಮ್ಮಿಕೊಂಡಿದ್ದ ಪ್ರತಿಜ್ಞಾ ವಿಧಿ ಭೋದನೆ ಹಾಗೂ ಮಹಾತ್ಮ ಹುತಾತ್ಮ ದಿನಾಚರಣೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಅಹಿಂಸೆ, ಸಮಾನತೆ, ಶಾಂತಿ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ವ್ಯಕ್ತಿಯನ್ನು ಒಬ್ಬ ಹಂತಕ ಹತ್ಯೆ ಮಾಡುತ್ತಾನೆ ಎಂದರೆ ಅದು ಒಬ್ಬ ವ್ಯಕ್ತಿಯ ಹತ್ಯೆಯಲ್ಲ ಮೌಲ್ಯಗಳ ವಿರುದ್ಧ ಇದ್ದ ದ್ವೇಷ. ಎಂದರು.
ಮಾನವೀಯ ಮೌಲ್ಯಗಳು, ಸತ್ಯ, ಅಹಿಂಸೆ, ಸಮಾನತೆಯ ಪರವಿದ್ದ ವ್ಯಕ್ತಿಯನ್ನು ಅಸಮಾನತೆ, ಕೋಮುವಾದದಿಂದ ಹಿಂಸೆಯ ಜಗತ್ತನ್ನು ಸೃಷ್ಠಿಮಾಡುವ ವಿಚಾರವನ್ನು ಹೊಂದಿರುವ ಗೂಡ್ಸೆ ಎಂಬ ವ್ಯಕ್ತಿ ಗುಂಡು ಹಾರಿಸಿ ಕೊಲ್ಲುತ್ತಾನೆ ಆದರೆ ಇಂದು ಆಧುನಿಕ ಗೂಡ್ಸೆಗಳು ಸುಳ್ಳುಗಳನ್ನು ಹರಡುವ ಮೂಲಕ ಗಾಂಧಿಯೇ ಸುಳ್ಳು ಎಂಬ ವಿಚಾರಗಳನ್ನು ಜನರಲ್ಲಿ ಬಿತ್ತಿ ಗಾಂಧಿಯ ವಿಚಾರಗಳನ್ನು ಮರೆಮಾಚುವ ಕೆಲಸವನ್ನು ಮಾಡುತ್ತಿರುವುದು ಎಲ್ಲರಿಗೂ ಎಚ್ಚರಿಕೆಯ ದಿನ ಎಂದು ತಿಳಿಸಿದರು.
ಪರಿಸರವಾದಿ ಸಿ. ಯತಿರಾಜು ಮಾತನಾಡಿ ದೇಶ ಹೊಸಹತುಶಾಹಿ ನೀತಿಗಳಿಗೆ ಬಲಿಯಾಗುತ್ತಿದ್ದು, ಗಾಂಧಿಯನ್ನು ಕೊಂದವರು ಇಂದು ಸಂವಿಧಾನವನ್ನು ಕೊಲ್ಲಲು ಮುಂದಾಗಿದ್ದಾರೆ. ಅಲ್ಲದೆ ಸಂವಿಧಾನದ ಆಶಯಗಳಿಗೆ ಗುಂಡು ಹೊಡೆಯುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ಗೂಡ್ಸೆಗಾಗಿ ದೇವಸ್ಥಾನ ಕಟ್ಟುವವರು 6 ಬಾರಿ ಗಾಂಧಿಯನ್ನು ಕೊಲ್ಲಲು ಪ್ರಯತ್ನಿಸಿದ್ದರು, ಹೀಗಾಗಿ ಮಹಾತ್ಮ ಗಾಂಧಿಯ ವಿಚಾರವನ್ನು ಉಳಿಸುವ ಪ್ರಸ್ತುತತೆ ಹೆಚ್ಚು ಇದೆ ಎಂದರು.
ಸ್ಲಂ ಜನಾದೋಲನದ ಅಧ್ಯಕ್ಷ ಎ. ನರಸಿಂಹಮೂರ್ತಿ ಮಾತನಾಡಿ ದೇಶದ ಸ್ವಾತಂತ್ರ್ಯ ಚಳುವಳಿಗೆ ಹೋರಾಡಿದ ಗಾಂಧಿ ಸ್ವದೇಶಿ ವಸ್ತುಗಳನ್ನು ಬಳಸಬೇಕು ಎಂದು ಸ್ವದೇಶಿ ಚಳುವಳಿಯನ್ನು ನಡೆಸಿದರು ಆದರೆ ಕೇಂದ್ರ ಸರ್ಕಾರ ಗಾಂಧಿಯವರ ಆಶಯಗಳನ್ನು ಮೂಲೆಗುಂಪು ಮಾಡುತ್ತಿದೆ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್‌ಮುಜೀಬ್ ಮಾತನಾಡಿ ಅಸಹಿಷ್ಣುತೆ, ಅಶಾಂತಿ ಹೆಚ್ಚುತ್ತಿದ್ದು, ಮಾನವೀಯತೆ, ಅಹಿಂಸೆ, ಶಾಂತಿಯ ಸಂಕೇತವಾದ ಗಾಂಧಿಯವರ ವಿಚಾರಧಾರೆಗಳನ್ನು ಯುವಕರು ಹೆಚ್ಚು ಹೆಚ್ಚು ಪಾಲಿಸಬೇಕಾಗಿದೆ ಎಂದರು
ಸಭೆಯಲ್ಲಿ ಪಂಡಿತ್ ಜವಹರ್, ತಾಜುದ್ದೀನ್ ಷರೀಫ್ ಮಾತನಾಡಿದರು, ಚಂದ್ರ, ಅರುಣ್ ಸೌಹಾರ್ದ ಗೀತೆಗಳನ್ನು ಹಾಡಿದರು, ಜನವಾದಿ ಮಹಿಳಾ ಸಂಘಟನೆಯ ಕಲ್ಪನಾ ಪ್ರತಿಜ್ಞಾ ವಿಧಿ ಭೋದಿಸಿದರು. ಕಾರ್ಯಕ್ರಮದಲ್ಲಿ ಎನ್.ಕೆ ಸುಬ್ರಮಣ್ಯ, ಟಿ.ಜಿ.ಶಿವಲಿಂಗಯ್ಯ, ಅಶ್ವಥ್ ನಾರಾಯಣ್ ಗುಟ್ಟೆ, ಹೆಚ್ ಗೋವಿಂದಯ್ಯ, ಚಂದ್ರಪ್ಪ, ಇಂತಿಯಾಜ್ ಭಾಗಿಯಾದರು. ಕಾರ್ಯಕ್ರಮವನ್ನು ಚಂದ್ರು ನಿರೂಪಿಸಿ, ರಾಘವೇಂದ್ರ ಸ್ವಾಗತಿಸಿ, ಅರುಣ್ ವಂದಿಸಿದರು.





