ಸರಕಾರದ ಪ್ರಸ್ತಾಪಿತ ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಔಟರ್ ರಿಂಗ್ ರಸ್ತೆಯ ಡಿಪಿಆರ್, ಸಂಪೂರ್ಣ ರೈತ ವಿರೋಧಿ, ಜನ ವಿರೋಧಿಯಾಗಿದ್ದು,ಸರಕಾರ ದಬ್ಬಾಳಿಕೆ,ದೌರ್ಜನ್ಯದ ಮೂಲಕ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಮುಂದಾಗಿದ್ದು,ಯಾವುದೇ ಕಾರಣಕ್ಕೂ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.
ತುಮಕೂರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಯಾರಿಸಿರುವ ವಿಸ್ಕೃತ ಯೋಜನಾ ವರದಿ(ಡಿಪಿಆರ್) ಸಂಪೂರ್ಣ ರೈತ ವಿರೋಧಿ, ಜನವಿರೋಧಿಯಾಗಿದೆ.ನಿಯಮಗಳನ್ನೆಲ್ಲ ಗಾಳಿಗೆ ತೂರಿ, ಭೂ ಮಾಫಿಯ ಕಪಿಮುಷ್ಠಿಗೆ ಸಿಲುಕಿ ರಿಂಗ್ ರಸ್ತೆ ಬದಲು, ಜಿಗ್‌ಜಾಗ್ ರಸ್ತೆ ಅಲೈನ್ ಮಾಡಿದ್ದು, ಓರ್ವ ರೈತನ ಮಗನಾಗಿ, ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸದೆ, ರಾಜಕೀಯ ರಹಿತವಾಗಿ ಅವರ ಬೆಂಬಲಕ್ಕೆ ನಿಂತಿದ್ದೇನೆ. ಈ ಹೋರಾಟದಿಂದ ನನ್ನ ರಾಜಕೀಯ ಜೀವನಕ್ಕೆ ಕುಂದುಂಟಾದರೂ ಹೆದರುವ ಪ್ರಶ್ನೆಯೇ ಇಲ್ಲ ಎಂದರು.
ಭಾರತೀಯ ಭೂ ಸ್ವಾಧೀನ ಅಧಿನಿಯಮ-2013 ರ ಪ್ರಕಾರ, ಒಂದು ಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ವೇಳೆ ಶೇ.80ರಷ್ಟು ರೈತರ ಒಪ್ಪಿಗೆ ಇರಬೇಕು, ನಿಯಮಾನುಸಾರ ರೈತರ ಒಪ್ಪಿಗೆ ಪಡೆಯಬೇಕು.ಆದರೆ ಗ್ರಾಮ ಸಭೆಗಳನ್ನೇ ನಡೆಸದೆ, ಸಾಮಾಜಿಕ ಪರಿಣಾಮಗಳನ್ನು ಲೆಕ್ಕ ಹಾಕದೆ, ರೈತರೊಂದಿಗೆ ಸಮಾಲೋಚನೆ ನಡೆಸದೆ,ಈ ಎಲ್ಲಾ ನಿಯಮಗಳನ್ನು ಪಾಲಿಸಿರುವುದಾಗಿ ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿ ಅನುಮೋಧನೆ ಪಡೆಯಲು ಮುಂದಾಗಿದ್ದಾರೆ. ಸಂಸದರು, ಕೇಂದ್ರದ ಮಂತ್ರಿಗಳಾಗಿರುವ ವಿ.ಸೋಮಣ್ಣ ಅವರು, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಹಾಗೂ ಜಿಲ್ಲಾಧಿಕಾರಿಗಳು ಯಾವ ಕಾರಣಕ್ಕೆ ಈ ಡಿಪಿಆರ್‌ನ್ನು ಒಪ್ಪಿಕೊಳ್ಳದೆ ತಿರಸ್ಕರಿಸಬೇಕು.ಇಲ್ಲದಿದ್ದಲ್ಲಿ,ಬೆಂಗಳೂರು ಗ್ರಾಮಾಂತರದ ಚನ್ನರಾಯಪಟ್ಟಣ ಹೋರಾಟದ ರೀತಿ, ನಿರಂತರ ಹೋರಾಟಕ್ಕೆ ರೈತರೊಂದಿಗೆ ಸಜ್ಜಾಗುವುದಾಗಿ ಡಿ.ಸಿ.ಗೌರಿಶಂಕರ್ ತಿಳಿಸಿದರು.
ಸರಕಾರದ ಪ್ರಸ್ತಾಪಿತ ಔಟರ್ ರಿಂಗ್ ರಸ್ತೆ ಹಾದು ಹೋಗುವ ಜಾಗದ ಸುಮಾರು 26 ಹಳ್ಳಿಗಳ 750ಕ್ಕೂ ಹೆಚ್ಚು ರೈತರ, 700 ಎಕರೆಗೂ ಹೆಚ್ಚು ಪ್ರದೇಶ ಭೂಸ್ವಾಧೀನಕ್ಕೆ ಗುರುತಿಸಲಾಗಿದೆ.ಸರಕಾರದ ಅಧಿಕಾರಿಗಳ ಪ್ರಕಾರ,ಈ ಪ್ರದೇಶ ಶೇ70ರಷ್ಟು ಒಣಭೂಮಿ ಎಂದು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ.ಆದರೆ ವಾಸ್ತವದಲ್ಲಿ ಶೇ.80ರಷ್ಟು ಜಾಗದಲ್ಲಿ ತೆಂಗು, ಅಡಿಕೆ, ಮಾವು, ಸಪೋಟ, ಸೀಬೆ, ಬಟರ್ ಪ್ರೂಟ್ ಸೇರಿದಂತೆ ಹಲವು ಜಾತಿಯ ಹಣ್ಣಿನ ಗಿಡಗಳನ್ನು ಹೊಂದಿದ ನೀರಾವರಿ ಪ್ರದೇಶವಿದೆ.ಡಿಪಿಆರ್ ಸಿದ್ದವಾಗಿ ವರ್ಷಗಳೇ ಕಳೆದರೂ, ಸಂತ್ರಸ್ಥ ರೈತರಿಗೆ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಾಕೀತು ಮಾಡಿದ ಮೇಲೆ ಭೂಮಿ ಕಳೆದುಕೊಳ್ಳುವ ರೈತರಿಗೆ ಡಿಪಿಆರ್ ನೀಡಲಾಗಿದೆ.ಜನರನ್ನು ಇಷ್ಟು ಕತ್ತಲಲ್ಲಿ ಇಟ್ಟು ರಸ್ತೆ ಮಾಡುವ ಅಗತ್ಯವಾದರೂ ಏನಿದೆ ?. ಗುಬ್ಬಿ ಯಿಂದ ದಾಬಸ್‌ಪೇಟೆಯವರೆಗೆ 100 ಅಡಿಗಳ ನಕಾಸೆ ರಸ್ತೆಯಿದ್ದು, ಅದನ್ನು ತೆರವು ಮಾಡಿ, ಅಭಿವೃದ್ದಿ ಪಡಿಸಲಿ ಎಂದು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಆಗ್ರಹಿಸಿದರು.
ನಾವು ಅಭಿವೃದ್ಧಿಗೆ ವಿರೋಧಿಗಳಲ್ಲ.ಆದರೆ ರೈತರ ಬದುಕು, ಕೃಷಿ, ಪರಿಸರ ಹಾಗೂ ಗ್ರಾಮೀಣ ಆರ್ಥಿಕತೆಯನ್ನು ಹಾಳುಮಾಡುವ ಅಭಿವೃದ್ಧಿ ಮಾದರಿಯನ್ನು ಒಪ್ಪಲಾಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರ ಅನುಮತಿ ಮತ್ತು ಪಾರದರ್ಶಕತೆ ಅತ್ಯಗತ್ಯ.ಸರಕಾರವು ತಕ್ಷಣ ರೈತರೊಂದಿಗೆ ಸಂವಾದ ನಡೆಸಿ ನ್ಯಾಯಸಮ್ಮತ ಹಾಗೂ ಪರಿಸರ ಸ್ನೇಹಿ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಭೈರಸಂದ್ರ ರಮೇಶ್, ಪಾಲನೇತ್ರಯ್ಯ, ಹೊಸಹಳ್ಳಿ ಲಿಂಗರಾಜು, ಹೆತ್ತೇನಹಳ್ಳಿ ಮಂಜುನಾಥ್, ನರಸಿಂಹಯ್ಯ, ರಾಜಶೇಖರ್, ಸುರೇಶ್, ಪ್ರಕಾಶ್ ಸೇರಿದಂತೆ ನಂದಿಹಳ್ಳಿ, ಭೈರಸಂದ್ರ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತ ಮುಖಂಡರು ಉಪಸ್ಥಿರಿದ್ದರು.





