ದುಃಖಗಳಿಂದ ಮಾತ್ರವೇ ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳಲು, ನಮ್ಮೊಳಗಿನ ಸೃಜನಶೀಲತೆಯನ್ನು ಉದ್ದೀಪಿಸಲು, ಮತ್ತೊಬ್ಬರ ನೋವಿಗೆ ಮಿಡಿಯುವಂತೆ ನಮ್ಮನ್ನು ಅಣಿಗೊಳಿಸಲು ಸಾಧ್ಯ ಎಂದು ಸಾಹಿತಿ ರಂಗಮ್ಮ ಹೊದೇಕಲ್ ಅಭಿಪ್ರಾಯಪಟ್ಟರು
ತುಮಕೂರು ನಗರದ ಎಸ್.ಎಸ್. ಪುರಂನ ಅಂಗಳ ಕಮ್ಯುನಿಟಿ ಟ್ರಸ್ಟ್ ನಲ್ಲಿ ದಾರಿಬುತ್ತಿ ಬಳಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ, ಧನಪಾಲ ನಾಗರಾಜಪ್ಪ ಅವರ ‘ಮಾತಾಡುವ ದೇವರು’ ಮತ್ತು ‘ಅವಳಿಗೆ ಹೇಳಿ’ ಕೃತಿಗಳ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು,
ಈ ಕೃತಿಯಲ್ಲಿಯೂ ದುಃಖವಿದೆ. ದುಃಖದ ಗಾಯಗಳಿವೆ. ಅದರೆ, ಇವು ಕೇವಲ ಗಾಯಗಳಲ್ಲ, ಇವು ನಮಗೆ ಜೀವನ ಪಾಠಗಳನ್ನು ಹೇಳುವ ಅನುಭವಗಳು. ಕವಿತೆ ಗಾಯಕ್ಕೆ ಮದ್ದು, ಬದುಕಿಗೆ ಚೈತನ್ಯ ತುಂಬುವ ಒರತೆ. ಯುವ ಕವಿಗಳಿಗೆ ಇಂಥಹ ಸಾಹಿತ್ಯ ಸಖ್ಯಗಳು ಹೊಸ ಓದುಗಳನ್ನು, ಭಿನ್ನ ಭಿನ್ನ ಜೀವನಾನುಭವಗಳನ್ನು ಕಲಿಸುತ್ತವೆ ಎಂದು ಹೇಳಿದರು.
ಶಿಕ್ಷಕಿ ಕೆ.ವಿ. ವಿವೇಕ ಮಾತನಾಡಿ “ಮಾತಾಡುವ ದೇವರು” ಕೃತಿಯನ್ನು ಸಾಮಾನ್ಯರಿಗೂ ಅರ್ಥವಾಗುವ ಭಾಷೆಯಲ್ಲಿ, ಮಾನವೀಯ ಮೌಲ್ಯಗಳನ್ನು ಕನ್ನಡದ ಪ್ರಾದೇಶಿಕತೆಗೆ ಹೊಂದಿಸಿ ಅನುವಾದಿಸಲಾಗಿದೆ. ಈ ಕೃತಿ, ಕನ್ನಡದ್ದೇ ಕೃತಿ. ನಮ್ಮದೇ ಬದುಕಿನ ಕಥೆ ಎಂಬಂತೆ ಮೂಡಿಬಂದಿದೆ. ಇದು ಓದುಗರಲ್ಲಿ ವಿಚಾರ ಮಂಥನವನ್ನು ಉಂಟುಮಾಡುವ ಮಹತ್ವದ ಕೃತಿ. ಇಲ್ಲಿನ ಸ್ತ್ರೀಪಾತ್ರಗಳು ತಮ್ಮ ಆತ್ಮಸಾಕ್ಷಿಯಂತೆ ತಮ್ಮ ಬದುಕಿನ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವುದು ವಿಶೇಷ ಎಂದರು.
“ಅವಳಿಗೆ ಹೇಳಿ” ಕೃತಿಯನ್ನು ಕುರಿತು ಮಾತನಾಡಿದ ದರ್ಶನ್ ಎಸ್.ಆರ್., ಸುತ್ತಲೂ ಕತ್ತಲೆ ಆವರಿಸಿರುವಾಗ, ಕವಿತೆ ಒಂದು ಬೆಳಕು. ನಮ್ಮ ಸುತ್ತ ಇರುವ ಶೋಷಣೆ, ದೌರ್ಜನ್ಯ, ಅಸಮಾನತೆಗಳೇ ಈ ಕತ್ತಲೆ. ಈ ಕತ್ತಲೆ ಇದೆ ಎಂಬುದನ್ನು ಕಾಣಿಸುವುದು ಕವಿತೆ. ಅದೇ ಬೆಳಕು. ಮೌನಕ್ಕೆ ಹೊಸ ಭಾಷ್ಯವನ್ನು ಈ ಕವಿತೆಗಳು ಕಟ್ಟಿ ಕೊಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್. ಕಲಾಧರ್, ಧನಪಾಲ್ ನಾಗರಾಜಪ್ಪ, ಮೇಘನ ಸಿ ಎಸ್., ದಾದಾಪೀರ್ ಬಿ. ಕೆ., ಅನೀಸ., ರಜಿನಿ, ರಂಜಿತ ಎಂ.ಎನ್, ಮಾನಸ ಎ.ಪಿ., ನವೀನ್ ಕುಮಾರ್ ಪಿ.ಆರ್., ಧನುಷ್ ಎಚ್ ಶೇಖರ್., ಪಾತಲಿಂಗಯ್ಯ ಡಿ.ಪಿ., ಹರಿಕೃಷ್ಣ ಕೆ.ಎಸ್., ಮಾರುತಿ ಟಿ., ಜ್ಞಾನೇಶ್ ಕೆ., ಸೇರಿದಂತೆ ಜಿಲ್ಲೆಯ ಕವಿಗಳು, ದಾರಿಬುತ್ತಿ ಹಾಗೂ ಅಂಗಳ ಟ್ರಸ್ಟ್ ನ ಸದಸ್ಯರು ಹಾಜರಿದ್ದರು.





