ತುಮಕೂರು ನಗರದ ಪಾಲಿಕೆ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಎದುರು ಒಳಮೀಸಲಾತಿ ಹೋರಾಟ ಸಮಿತಿ ಹಾಗೂ ಜಿಲ್ಲಾ ಮಾದಾರ ಮಹಾಸಭಾ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿಯನ್ನು ಕಡ್ಡಾಯವಾಗಿ ಜಾರಿ ಮಾಡುವಂತೆ ಆಗ್ರಹಿಸಿ ಮಾದಿಗ ಸಮುದಾಯದ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.
ವಿವಿಧ ಇಲಾಖೆಯಲ್ಲಿ 56 ಸಾವಿರ ಹುದ್ದೆಗಳನ್ನು ನೇಮಕ ಮಾಡುವ ಸಮಯದಲ್ಲಿ ಒಳಮೀಸಲಾತಿ ಅಳವಡಿಸ ಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ರಾಜ್ಯ ಸರ್ಕಾರ ಒಂದು ಕಡೆ ಒಳಮೀಸಲಾತಿ ಜಾರಿಗೆ ಆದೇಶ ಮಾಡಿ. ಇನ್ನೊಂದೆಡೆ ತಾಂತ್ರಿಕ ಕಾರಣಗಳ ನೆಪವೊಡ್ಡಿ ಜಾರಿ ಮಾಡದೆ ಅನ್ಯಾಯ ಮಾಡುತ್ತಿದೆ ಎಂದು ಅರೋಪಿಸಿದರು.
ಸಾಮಾಜಿಕ ನ್ಯಾಯದ ಪರ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿಗೆ ತಂದಿದ್ದಾರೆ. ಈ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಪಾಲರು ಅಂಕಿತ ಹಾಕಿದ ನಂತರವೂ ಇದಕ್ಕೆ ವ್ಯತಿರಿಕ್ತವಾಗಿ ಆದೇಶ ಮಾಡಿ ನೇಮಕಾತಿ ಮಾಡುತ್ತಿದೆ. ಇದು ಸಮುದಾಯದ ವಿದ್ಯಾವಂತ ನಿರುದ್ಯೋಗಿ ಯುವಕರ ಭವಿಷ್ಯಕ್ಕೆ ಮಾರಕವಾಗುತ್ತಿದೆ. ಕಳೆದ ಮೂವತ್ತೈದು ವರ್ಷಗಳ ನಿರಂತರ ಹೋರಾಟವನ್ನು ಅಣಕ ಮಾಡುವಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ತಕ್ಷ ಣವೇ ನಿರ್ಧಾರ ವಾಪಾಸ್ ಪಡೆದು ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದರು.
ಪ್ರಮುಖ ಬೇಡಿಕೆಗಳು
ರಾಜ್ಯ ಸರ್ಕಾರದ ನೇಮಕಾತಿಯಲ್ಲಿ ಒಳಮೀಸಲಾತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಈ ಒಳಮೀಸಲಾತಿಯಲ್ಲಿ ರೋಸ್ಪರ್, ಬಿಂದು ಸಮಸ್ಯೆಗಳನ್ನು ಪರಿಹರಿಸಲು ಶಾಶ್ವತ ಆಯೋಗ ರಚಿಸಬೇಕು. ನ್ಯಾಯಾಲಯದಲ್ಲಿ ಒಳಮೀಸಲಾತಿ ಪರವಾಗಿ ಸರ್ಕಾರ ಸಮರ್ಥವಾದವಾದ, ಮಂಡನೆ ಮಾಡಬೇಕು. ಪರಿಶಿಷ್ಟ ಜಾತಿಗೆ ಶೇ 17. ಪಂಗಡಕ್ಕೆ ಶೇ 7ರ ಅಡಿಯಲ್ಲಿ ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು. 2022ರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಹೆಚ್ಚಿಸಿರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಕಳುಹಿಸಿದೆ. ಇದನ್ನು ಷೆಡ್ಯೂಲ್ 9ಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರ ಮೇಲೆ ಒತ್ತಡ ಹಾಕಬೇಕು.
ಸಂಘಟನೆ ಪ್ರಮುಖರಾದ ಕೆ.ದೊರೈ ರಾಜ್, ವೈ.ಎಚ್.ಹುಚ್ಚಯ್ಯ, ವೈ.ಕೆ. ಬಾಲಕೃಷ್ಣಪ್ಪ, ಹೆತ್ತೇನಹಳ್ಳಿ ಮಂಜುನಾಥ್, ಕೊಟ್ಟಶಂಕರ್, ಕೋಡಿ ಯಾಲ ಮಹದೇವ, ಕೃಷ್ಣಮೂರ್ತಿ, ಗಂಗಹನುಮಯ್ಯ, ನರಸೀ ಯಪ್ಪ, ಬಂಡೆಕುಮಾರ್, ಸೋರೆಕುಂಟೆ ಯೋಗೀಶ್, ನರಸಿಂಹಯ್ಯ, ಗಂಗಾಧರ್, ಶಿವಕುಮಾರ್, ರಂಗಸ್ವಾಮಯ್ಯ, ಟಿ.ಸಿ.ರಾಮಯ್ಯ, ಕ್ಯಾಸಂದ್ರ ಮೂರ್ತಿ, ಕಸ್ತೂರ್ ಮೂರ್ತಿ, ಎ.ನರಸಿಂಹಮೂ ರ್ತಿ, ಡಾ.ಅರುಂಧತಿ, ಗುರುಮೂರ್ತಿ, ಬೋರಪ್ಪ, ಆರ್.ರಾಮಚಂದ್ರಪ್ಪ, ಗೋಪಾಲಯ್ಯ, ರಾಜೇಶ್, ಪ್ರೊ.ನಿಂಗಪ್ಪ ಮೊದಲಾದವರು ಭಾಗವಹಿಸಿದ್ದರು.





