ದಲಿತ ಮುಖ್ಯಮಂತ್ರಿ ಕನಸನ್ನು ಹೊತ್ತಿರುವ ಡಾ. ಜಿ. ಪರಮೇಶ್ವರ್ ಅವರ ಜಿಲ್ಲೆಯಲ್ಲೇ ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವುದನ್ನು ತೋರಿಸುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅರಸಮ್ಮ ದೇವಾಲಯಕ್ಕೆ ಪೂಜೆಗೆಂದು ತೆರಳಿದ್ದ ದಲಿತ ನವದಂಪತಿಯನ್ನು ದೇವಾಲಯದೊಳಗಿದ್ದ ಸವರ್ಣೀಯ ವ್ಯಕ್ತಿಯೊಬ್ಬ ದೇವರು ಬಂದಂತೆ ನಾಟಕವಾಡಿ ಅವಮಾನಿಸಿ ಹೊರಹಾಕಿರುವ ಘಟನೆ ನಡೆದಿದೆ. ಹೊಸದಾಗಿ ಮದುವೆಯಾಗಿದ್ದ ಜಗದೀಶ್ ಮತ್ತು ಅವರ ಕುಟುಂಬ ದೇವಾಲಯದೊಳಗೆ ಇದ್ದ ವೇಳೆ, ನಾರಾಯಣಪ್ಪ ಎಂಬ ವ್ಯಕ್ತಿ ದೇವರು ತನ್ನೊಳಗೆ ಬಂದಿದ್ದಾನೆಂದು ಹೇಳಿಕೊಂಡು, ʼದಲಿತರಿಗೆ ಇಲ್ಲಿ ಪ್ರವೇಶವಿಲ್ಲ, ಪುಣ್ಯ ಮಾಡಿಸಬೇಕುʼ ಎಂದು ಗದರಿಸಿ ದೇವಾಲಯದ ಹೊರಗೆ ತಳ್ಳಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವೇಳೆ ದೇವಾಲಯದೊಳಗಿದ್ದ ದಲಿತ ಕುಟುಂಬವನ್ನು ʼನಡೀ ಆಚೆಗೆʼ ಎಂದು ಗದರಿಸಿ ಹೊರಹಾಕುವ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮಸ್ಥರ ವರ್ತನೆಯಿಂದ ಮನನೊಂದ ಜಗದೀಶ್ ತುರುವೇಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತುಮಕೂರು | ತುಮಕೂರು | ವಿಜೃಂಭಣೆಯ ಹೆತ್ತೇನಹಳ್ಳಿ ರಥೋತ್ಸವ
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನಾರಾಯಣಪ್ಪ, ಪ್ರಭಾ, ಕಾಂತಣ್ಣ, ಅಮೂಲ್ಯ, ಪುಟ್ಟೇಗೌಡ, ಪದ್ಮ ಸೇರಿದಂತೆ ಇತರರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ. ದೇವರು ಬಂದಂತೆ ನಾಟಕವಾಡಿ ಅವಮಾನಿಸಿದ್ದ ನಾರಾಯಣಪ್ಪನನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.





