ದೇವಾಲಯದೊಳಕ್ಕೆ ದಲಿತ ನವ ಜೋಡಿಗೆ ಆಸ್ಪದ ಕೊಡದೇ ತಡೆಯುಂಟು ಮಾಡಿದ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ತುರುವೇಕೆರೆ ತಾಲೂಕು ಆಡಳಿತ ದೇವಾಲಯದೊಳಕ್ಕೆ ಪ್ರವೇಶ ಸಿಗದೇ ಅವಮಾನಕ್ಕೆ ಈಡಾಗಿದ್ದ ದಲಿತ ಸಮುದಾಯಕ್ಕೆ ಸೇರಿದ ನವ ಜೋಡಿಯು ತಾಲೂಕು ದಂಡಾಧಿಕಾರಿ ಕುಂ ಇ ಅಹಮದ್ ನೇತೃತ್ವದಲ್ಲಿ ಅರಸಮ್ಮನ ದೇವಾಲಯ ಪ್ರವೇಶಿಸಿ ದೇವರ ಪೂಜೆ ಮಾಡಿಸಿದರು.
ಕಳೆದ ಐದಾರು ದಿನಗಳ ಹಿಂದೆಯಷ್ಠೇ ಮದುವೆಯಾಗಿದ್ದ ತಾಲೂಕಿನ ದಬ್ಬೇಘಟ್ಟ ಹೋಬಳಿ ಗೋಣಿತುಮಕೂರಿನ ಪಂಕಜ ಎಂಬ ದಲಿತ ಸಮುದಾಯಕ್ಕೆ ಸೇರಿದ ಯುವತಿ ತನ್ನ ಗಂಡ ಪುನಿತ್ ಮತ್ತು ತನ್ನ ಕುಟುಂಬದ ಸದಸ್ಯರೊಂದಿಗೆ ಪೂಜೆ ಸಲ್ಲಿಸಲು ಅರಸಮ್ಮ ದೇವಾಲಯಕ್ಕೆ ಬಂದಿದ್ದರು. ಆ ವೇಳೆ ಅಲ್ಲಿಯ ಪೂಜಾರಿ ನಾರಾಯಣಪ್ಪ ಎಂಬುವವರು ಮೈಮೇಲೆ ದೇವರು ಬಂದಂತೆ ನಾಟಕವಾಡಿ ನವ ಜೋಡಿಯನ್ನು ದೇವಾಲಯ ಪ್ರವೇಶಿಸಕೂಡದು. ನೀವು ದಲಿತರು ಎಂದು ಅಬ್ಬರಿಸಿ ದೇವಾಲಯದಿಂದ ಹೊರಗೆ ಕಳಿಸಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿ ರಾಜ್ಯಮಟ್ಟದ ಸುದ್ದಿಗೆ ಗ್ರಾಸವಾಗಿತ್ತು ಎಂಬುದನ್ನು ಸ್ಮರಿಸಬಹುದಾಗಿದೆ.
ತಹಸೀಲ್ದಾರ್ ಕುಂ ಇ ಅಹಮದ್, ಸಿಪಿಐ ಲೋಹಿತ್ ಮತ್ತು ಎಸೈ ಮೂರ್ತಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಗೋಣಿತುಮಕೂರಿನಲ್ಲಿ ಶಾಂತಿ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ತಹಸೀಲ್ದಾರ್ ಅಸ್ಪೃಶ್ಯತೆ ಆಚರಣೆ ಕಾನೂನಿಗೆ ವಿರೋಧ. ಇಂತಹ ಅನಿಷ್ಠ ಪದ್ದತಿಗಳಿಗೆ ಇತಿಶ್ರೀ ಹಾಡಬೇಕೆಂದು ತಿಳಿಹೇಳಿದರು. ಗ್ರಾಮದಲ್ಲಿ ಎಲ್ಲರೂ ಸೌಹಾರ್ದಯುತವಾಗಿ ಬಾಳಬೇಕು. ಜಾತಿಯ ವಿಷಯದಲ್ಲಿ ಸಂಘರ್ಷಕ್ಕೆ ಅವಕಾಶ ನೀಡಬಾರದೆಂದು ಮನವಿ ಮಾಡಿದರು.
ದಲಿತ ನವ ಜೋಡಿ ದೇವಾಲಯ ಪ್ರವೇಶಿಸುವ ವೇಳೆ ಗ್ರಾಮದ ಹಲವರು ಇದ್ದರು.
ವರದಿ : ಎಸ್. ನಾಗಭೂಷಣ್





