ಜಿಲ್ಲೆಯಲ್ಲಿ ತೊಗರಿ ಕಟಾವು ಬಹುತೇಕ ಮುಗಿಯುತ್ತಾ ಬಂದಿದೆ. ಈ ಬಾರಿ ತೊಗರಿ ಬೆಲೆ ಕುಸಿತ ಕಂಡಿದ್ದ ಹಿನ್ನಲೆ ತೊಗರಿ ಬೆಳೆದಿರುವ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಪುಸ್ತಕ ವರ್ಷ ಉತ್ತಮ ಮಳೆಯಾಗಿದ್ದು, ಇಳುವರಿ ಕೂಡ ನಿರೀಕ್ಷೆಯಂತೆ ಬಂದಿದೆ ಎಂದು ರೈತರು ಹಿಗ್ಗಿದರು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೊಗರಿ ಆವಕ ಪ್ರಮಾಣ ಹೆಚ್ಚಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ದರ ಇಳಿಕೆ ಕಂಡಿದ್ದು, ಹಲವು ರೈತರು ಬೆಳೆದ ತೊಗರಿಯನ್ನು ಮನೆಯಲ್ಲಿ ಇಡುವ ಸಂದರ್ಭ ಬಂದಿದೆ ಎನ್ನುತ್ತಾರೆ.
ಎಪಿಎಂಸಿಯಲ್ಲಿ ಕಳೆದ ಒಂದು ವಾರದಿಂದ ಪ್ರತಿ ದಿನ 3 ರಿಂದ 4 ಸಾವಿರ ಕ್ವಿಂಟಾಲ್ ತೊಗರಿ ಆವಕ ಆಗುತ್ತಿದೆ. ಸದ್ಯ ಪ್ರತಿ ಕ್ವಿಂಟಾಲ್‌ಗೆ ₹6,029 ರಿಂದ ₹8,333 ದರವಿದೆ. ಮುಂದಿನ ದಿನಗಳಲ್ಲಿ ಆವಕ ಮತ್ತಷ್ಟು ಹೆಚ್ಚಳವಾಗಲಿದೆ. ಇದರಿಂದ ಧಾರಣೆಯು ಇಳಿಕೆ ಆಗಬಹುದು ಎಂದು ರೈತರು ಹೇಳುತ್ತಾರೆ.
ʼಕಳೆದ ಜ.13 ರಿಂದ ಜ.22ವರೆಗೆ ಒಟ್ಟು 22,324 ಕ್ವಿಂಟಾಲ್ ತೊಗರಿ ಎಪಿಎಂಸಿಯಲ್ಲಿ ಮಾರಾಟವಾಗಿದೆ. ಆದರೆ ಕಳೆದ ಒಂದು ವಾರದೊಳಗೆ ₹300 ದರ ಕುಸಿತದಿಂದಾಗಿ ಬೆಳೆಗಾರರು ಮಾರುಕಟ್ಟೆಗೆ ತೊಗರಿ ತರಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ವರ್ಷದ ಇದೇ ಅವಧಿಯಲ್ಲಿ ತೊಗರಿ ಪ್ರತಿ ಕ್ವಿಂಟಾಲ್‌ಗೆ ₹9 ಸಾವಿರ ದರ ಇತ್ತು, ತದನಂತರ ₹10 ಸಾವಿರಕ್ಕೆ ಏರಿಕೆಯಾಗಿತ್ತು. ಈ ವರ್ಷ ಇಳುವರಿ ಹೆಚ್ಚಾಗಿದಕ್ಕೆ ದರ ಇಳಿಕೆಯ ಹಾದಿ ಹಿಡಿದಿದೆʼ ಎಂದು ತೊಗರಿ ವ್ಯಾಪಾರಿಯೊಬ್ಬರು ಹೇಳುತ್ತಾರೆ.
1.22 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆ :
ಕಲ್ಯಾಣ ಕರ್ನಾಟಕದ ಪ್ರಮುಖ ಬೆಳೆಯಾದ ತೊಗರಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 1.22 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆಯಾಗಿದೆ. ಅದರಲ್ಲಿ ಅತಿ ಹೆಚ್ಚು ಬಸವಕಲ್ಯಾಣ (27,632), ಭಾಲ್ಕಿ (27,460) ಹಾಗೂ ಔರಾದ್-ಕಮಲನಗರ (28,150) ತಾಲ್ಲೂಕಿನಲ್ಲಿ ತೊಗರಿ ಬಿತ್ತನೆಯಾಗಿದ್ದು, ಹೆಚ್ಚಿನ ಉತ್ಪಾದನೆ ನಿರೀಕ್ಷೆಯಿದೆ.

ʼಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದ ತೊಗರಿ ಬೆಳೆ ಅತಿವೃಷ್ಟಿ, ರೋಗ ಬಾಧೆಯಿಂದ ಒಟ್ಟು 5,252 ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ. ಒಟ್ಟು ಹಾನಿಯಾದ ಅರ್ಧದಷ್ಟು ರೈತರಿಗೆ ಬೆಳೆ ಪರಿಹಾರ ಧನ ವಿತರಿಸಲಾಗಿದೆ. ಉಳಿದ ಪರಿಹಾರ ಮೊತ್ತ ಶೀಘ್ರದಲ್ಲಿ ರೈತರ ಖಾತೆಗೆ ಜಮೆ ಮಾಡಲಾಗುವುದುʼ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್‌ಗೆ ತೊಗರಿಗೆ ₹7,550 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ ಮಾಡಿದೆ. ಎಕರೆಗೆ ಗರಿಷ್ಠ 4 ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಾಲ್‌ವರೆಗೆ ಎಫ್‌ಎಕ್ಯೂ ಗುಣಮಟ್ಟದ ತೊಗರಿ ಖರೀದಿಸಲಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 70 ಖರೀದಿ ಕೇಂದ್ರಗಳು ತೆರೆಯಲಾಗಿದ್ದು, ಶೀಘ್ರದಲ್ಲೇ ನೋಂದಣಿ ಆರಂಭವಾಗುತ್ತದೆʼ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಈದಿನ.ಕಾಮ್ ಗೆ ತಿಳಿಸಿದ್ದಾರೆ.
ಆರಂಭವಾಗದ ತೊಗರಿ ಖರೀದಿ ಕೇಂದ್ರ :
ಕೇಂದ್ರ ಸರ್ಕಾರ ತೊಗರಿಗೆ ನಿಗದಿಪಡಿಸಿರುವ ಬೆಂಬಲ ಬೆಲೆಯು ಮುಕ್ತ ಮಾರುಕಟ್ಟೆ ದರಕ್ಕಿಂತ ಕಡಿಮೆಯಾಗಿದೆ. ಹೀಗಾಗಿ ಕೆಲ ರೈತರು ಮಹಾರಾಷ್ಟ್ರದ ಲಾತೂರ್, ಉದಗೀರ್ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ತೊಗರಿ ಕಟಾವು ಮುಗಿದಿದೆ. ಜಿಲ್ಲೆಯಲ್ಲಿ 70 ಖರೀದಿ ಕೇಂದ್ರಗಳು ತೆರೆಯಲಾಗಿದೆ ಎಂದು ಆಧಿಕಾರಿಗಳು ಹೇಳಿದರೂ ಇಲ್ಲಿಯವರೆಗೆ ನೋಂದಣಿ ಕಾರ್ಯ ಆರಂಭವಾಗಿಲ್ಲʼ ಎಂದು ಬಸವಕಲ್ಯಾಣದ ರೈತ ಮುಖಂಡ ರುದ್ರಯ್ಯಾ ಸ್ವಾಮಿ ಹೇಳುತ್ತಾರೆ.
ಕ್ವಿಂಟಾಲ್ ತೊಗರಿಗೆ ಹೆಚ್ಚುವರಿ ₹450 ಬೆಂಬಲ ಬೆಲೆ :
ʼಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ರಾಜ್ಯ ಸರ್ಕಾರ ಕ್ವಿಂಟಾಲ್‌ಗೆ ಹೆಚ್ಚುವರಿ ₹450 ನೀಡಲು ನಿರ್ಧರಿಸಿದೆ. ಈ ಉದ್ದೇಶಕ್ಕೆ ₹140 ಕೋಟಿ ಒದಗಿಸಲಾಗುವುದು’ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಘೋಷಿಸಿದರು.
ʼಒಟ್ಟು ಪ್ರತಿ ಕ್ವಿಂಟಾಲ್‌ಗೆ ₹8 ಸಾವಿರ ಬೆಂಬಲ ಬೆಲೆ ನೀಡಲಾಗುವುದು. ಕೇಂದ್ರ ಸರ್ಕಾರದ ನಫೆಡ್ ಖರೀದಿ ಏಜನ್ಸಿಯಾಗಿದ್ದು, ದಾಖಲೆಗಳನ್ನು ಸಕಾಲಕ್ಕೆ ಒದಗಿಸದ ಕಾರಣ ಖರೀದಿ ಪ್ರಕ್ರಿಯೆ ವಿಳಂಬವಾಗಿದೆ. ರಾಜ್ಯಾದ್ಯಂತ 400ಕ್ಕೂ ಅಧಿಕ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ತೊಗರಿ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲʼ ಎಂದು ಹೇಳಿದರು.

ʼಇದೇ ಮೊದಲ ಬಾರಿಗೆ ₹8 ಸಾವಿರ ಧಾರಣೆಯಲ್ಲಿ ತೊಗರಿ ಖರೀದಿ ಮಾಡಲಾಗುತ್ತಿದೆ. ಇದುವರೆಗೆ ₹5,800 ಧಾರಣೆಯಲ್ಲಿ ಖರೀದಿ ಮಾಡಲಾಗುತ್ತಿತ್ತು. ಬೀದರ್ ಜಿಲ್ಲೆಯಿಂದ ಚಿತ್ರದುರ್ಗ ಜಿಲ್ಲೆಯವರೆಗೆ ತೊಗರಿ ಬೆಳೆಯಲಾಗುತ್ತಿದ್ದು, ರೈತರು ಬೆಂಬಲ ಬೆಲೆ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದರು. ರೈತರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿ ಕ್ವಿಂಟಾಲ್‌ಗೆ ₹450 ಹೆಚ್ಚುವರಿ ಕೊಡುವ ನಿರ್ಧಾರ ಕೈಗೊಂಡಿದೆʼ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಟ್ರ್ಯಾಕ್ಟರ್ ತಗುಲಿ ಬಸವಣ್ಣ ಪ್ರತಿಮೆ ಭಗ್ನ; ಹೊಸ ಪ್ರತಿಮೆ ಸ್ಥಾಪನೆಗೆ ಸೂಚನೆ : ಸಚಿವ ಈಶ್ವರ ಖಂಡ್ರೆ
ʼತೊಗರಿ ಬೆಳೆಗೆ ಮೋಡ ಕವಿದ ವಾತಾವರಣ, ಬೆಳಗಿನ ಜಾವ ಬಿದ್ದ ಮಂಜಿನಿಂದ ರೋಗ ಬಾಧೆ ಕಾಣಿಸಿಕೊಂಡು ಹೂ ಉದುರಿತ್ತು. ಹೀಗಾಗಿ ಎಕರೆಗೆ 3 ರಿಂದ 4 ಕ್ವಿಂಟಾಲ್ ನಿರೀಕ್ಷೆಯ ಕನಸು ಕಾಣುತ್ತಿದ್ದ ರೈತರಿಗೆ ಭಾರಿ ನಿರಾಸೆಯುಂಟಾಗಿದೆ. ಸರ್ಕಾರ ಮುಂಗಾರು ಅತಿವೃಷ್ಟಿಯಿಂದ ಹಾನಿಯಾದ ಬೆಳೆಗೆ ತಕ್ಷಣ ಪರಿಹಾರ ಕೊಡಬೇಕು. ಪ್ರತಿ ಕ್ವಿಂಟಾಲ್ ತೊಗರಿಗೆ ₹12 ಸಾವಿರ ಬೆಲೆ ನಿಗದಿಪಡಿಸಬೇಕುʼ ಎಂದು ರೈತ ಸಂಘಟನೆ ಮುಖಂಡ ಶ್ರೀಮಂತ ಬಿರಾದರ್ ಆಗ್ರಹಿಸಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




