ಸತ್ತು ಹೋದ ವ್ಯಕ್ತಿಯ ಶವವನ್ನು ನೀರು ತುಂಬಿದ ಗುಂಡಿಯಲ್ಲೇ ಹೂಳುವ ಹೀನಾಯ ಸ್ಥಿತಿ ತಾಲೂಕಿನ ದಂಡಿನಶಿವರದ ಪರಿಶಿಷ್ಠ ಜನಾಂಗದ ಜನತೆಗೆ ಬಂದೊದಗಿರುವುದು ವಿಷಾದನೀಯ ಸಂಗತಿ.
ದಂಡಿನಶಿವರ ಹೋಬಳಿ ಕೇಂದ್ರ. ಇಲ್ಲಿ ಬಹುಪಾಲು ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೇ ಇದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯದವರಲ್ಲಿ ಬಹುಮಂದಿಗೆ ಸ್ವಂತ ಜಮೀನು ಇಲ್ಲ. ಜಮೀನು ಇರುವವರು ತಮ್ಮ ಕುಟುಂಬದವರಲ್ಲಿ ಮೃತಪಟ್ಟವರ ಶವ ಸಂಸ್ಕಾರವನ್ನು ತಮ್ಮ ಜಮೀನಿನಲ್ಲೇ ಮಾಡುತ್ತಾರೆ. ಆದರೆ ಜಮೀನು ಇಲ್ಲದವರ ಪಾಡು ಹೇಳತೀರದು.
ಇಲ್ಲಿಯ ದಲಿತರು ಹತ್ತಾರು ವರ್ಷಗಳಿಂದ ಶವ ಸಂಸ್ಕಾರಕ್ಕಾಗಿ ಭೂಮಿ ಕೊಡಿ ಎಂದು ಹಗಲು ರಾತ್ರಿ ಎನ್ನದೇ ಹೋರಾಟ ಮಾಡಿದ್ದಾರೆ. ಅವರ ಹೋರಾಟದ ಫಲವೇನೋ ಎಂಬಂತೆ ಕಳೆದ ಒಂದೆರೆಡು ವರ್ಷಗಳ ಹಿಂದೆ ಗ್ರಾಮದ ಕೆರೆಯ ಬಳಿ ಸುಮಾರು 20 ಗುಂಟೆ ಜಮೀನನ್ನು ಸ್ವಶಾನಕ್ಕೆಂದು ಗುರುತಿಸಲಾಯಿತು. ಸುಮಾರು 13 ಲಕ್ಷ ರು ವೆಚ್ಚದಲ್ಲಿ ಅದರ ಅಭಿವೃದ್ಧಿಗೆಂದು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಆದರೆ ನಿರ್ಮಿತಿ ಕೇಂದ್ರದವರು 20 ಗುಂಟೆ ಜಮೀನಿನಲ್ಲಿರುವ ನೂರಾರು ಗುಂಡಿಗಳನ್ನು ಮುಚ್ಚಲು ನಮಗೆ ಆದೇಶಿಸಿಲ್ಲ. ಕೇವಲ ಬೇಲಿ, ಶವ ಇಡುವ ಸ್ಥಳ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನಷ್ಠೇ ಮಾಡಲು ತಿಳಿಸಲಾಗಿದೆ ಎಂದು ಹೇಳಿ ಕೈ ತೊಳೆದುಕೊಂಡಿದೆ. 20 ಗುಂಟೆ ಜಮೀನಿನಲ್ಲಿ ನೂರಾರು ಆಳುದ್ದದ ಗುಂಡಿಗಳಿವೆ. ಅವುಗಳನ್ನು ಸಮತಟ್ಟು ಮಾಡದ ವಿನಃ ಸ್ವಶಾನದ ಅಭಿವೃದ್ಧಿ ಸಾಧ್ಯವಿಲ್ಲ.
ಬುಧವಾರ ದಂಡಿನಶಿವರ ಗ್ರಾಮದ ಹೊಸ ಕಾಲೋನಿಯ ಸಿದ್ದಮ್ಮ ಎಂಬ ವಯೋವೃದ್ಧರೊಬ್ಬರು ಮರಣ ಹೊಂದಿದ್ದರು. ಇವರ ಶವಸಂಸ್ಕಾರ ಮಾಡಲು ಆ ಕುಟುಂಬದ ಸದಸ್ಯರು ದಲಿತರಿಗಾಗಿ ಮೀಸಲಿಟ್ಟಿದ್ದ ಪ್ರದೇಶಕ್ಕೆ ಶವ ತಂದರು. ಶವ ಹೂಳಲು ಅಗೆದಂತೆಲ್ಲಾ ನೀರು ಜಿನುಗುತ್ತಿತ್ತು. ಎಷ್ಟು ನೀರು ಹೊರಗೆ ಚೆಲ್ಲಿದರೂ ನೀರು ಬರುತ್ತಲೇ ಇತ್ತು. ಬೇರೊಂದು ಗುಂಡಿ ತೆಗೆಯಲ ಪ್ರಯತ್ನಿಸಿದರೂ ಸಹ ಇದಕ್ಕಿಂತ ಭಿನ್ನವೇನಿಲ್ಲ. ಕೊನೆಗೆ ವಿಧಿ ಇಲ್ಲದೇ ನೀರು ತುಂಬಿದ ಗುಂಡಿಯಲ್ಲೇ ಸಿದ್ದಮ್ಮನವರ ಶವವನ್ನು ಹೂಳಲಾಯಿತು. ಈ ದುಃಸ್ಥಿತಿ ಕಂಡು ಶವ ಸಂಸ್ಕಾರಕ್ಕೆ ಬಂದಿದ್ದ ಕುಟುಂಬದ ಸದಸ್ಯರು ತಾಲೂಕು ಆಡಳಿತಕ್ಕೆ ಹಿಡಿಶಾಪ ಹಾಕಿದರು.
ದಂಡಿನಶಿವರ ಹೋಬಳಿ ಒಂದೇ ಅಲ್ಲ. ತಾಲೂಕಿನ ಬಹತೇಕ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನ ಇಲ್ಲವೇ ಇಲ್ಲ. ಶವ ಹೂಳುವ ಸಂದರ್ಭ ಬಂದಲ್ಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಇನ್ನೂ ಹೀಗೆ ಹೀನಾಯವಾಗಿ ಬದುಕುತ್ತಿದ್ದೇವಲ್ಲಾ ಎಂಬ ನಾಚಿಕೆಯಾಗುತ್ತದೆ ಎಂದು ಡಿಎಸ್ ಎಸ್ ನ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯಿತಿಯಿಂದ ಸುಮಾರು 6 ಲಕ್ಷ ರೂಗಳಲ್ಲಿ 20 ಗುಂಟೆ ಜಮೀನಿನಲ್ಲಿರುವ ಗುಂಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗಿತ್ತು. ಅದರೆ ಕಾಮಗಾರಿ ಅರ್ಧಂಬರ್ಧ ಆಗಿದೆ. ಆಗಿರುವ ಕಾಮಗಾರಿಯೂ ಕೆಲಸಕ್ಕೆ ಬಾರದಾಗಿದೆ. ಹಣ ಮಾತ್ರ ಖರ್ಚಾಗಿದೆ. ದಲಿತರಿಗೆ ಪ್ರಾತಿನಿಧ್ಯ ನೀಡುತ್ತೇವೆಂದು ಹೇಳುವ ಜನಪ್ರತಿನಿದೀಗಳು ತಮ್ಮ ಹೀನಾಯ ಸ್ಥಿತಿಯನ್ನೊಮ್ಮೆ ನೋಡಲಿ ಎಂದು ದಂಡಿನಶಿವರ ಕುಮಾರ್ ಸವಾಲು ಹಾಕಿದ್ದಾರೆ.
ಶೀಘ್ರದಲ್ಲೇ ದಂಡಿನಶಿವರದ ದಲಿತರ ಸ್ಮಶಾನವನ್ನು ಸರಿದಾರಿಗೆ ತರಬೇಕು. ಅಲ್ಲದೇ ತಾಲೂಕಿನ ಎಲ್ಲೆಡೆ ದಲಿತರಿಗೆ ಸ್ಮಶಾನ ಕಲ್ಪಿಸಬೇಕು. ತಪ್ಪಿದಲ್ಲಿ ತಾಲೂಕು ಕಛೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ತಾಲೂಕು ಆಡಳಿತಕ್ಕೆ ದಂಡಿನಶಿವರ ಕುಮಾರ್ ಎಚ್ಚರಿಕೆ ನೀಡಿದ್ದಾರೆ.





