ಹಲವಾರು ದಿನಗಳಿಂದ ಜನರಿಗೆ, ಜಾನುವಾರುಗಳಿಗೆ ಉಪಟಳ ನೀಡುತ್ತಿದ್ದ ಚಿರತೆಯನ್ನು ಬೋನಿಗೆ ಕೆಡುವುದರಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ತಾಲೂಕಿನ ಮಲ್ಲಾಘಟ್ಟ, ದೊಡ್ಡಾಘಟ್ಟ, ಆನೇಕೆರೆ, ಯಡೇಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚಿರತೆಯ ಕಾಟ ಅತಿಯಾಗಿತ್ತು. ಮೊನ್ನೆಯಷ್ಠೇ ಯಡೇಹಳ್ಳಿಯ ರೈತರೊಬ್ಬರ ಮನೆಯ ಮುಂಭಾಗ ಕಟ್ಟಿಹಾಕಲಾಗಿದ್ದ ಎರಡು ಮೇಕೆಗಳನ್ನು ಚಿರತೆ ತಿಂದು ಅರ್ಧಂಭರ್ಧ ಅಲ್ಲೇ ಬಿಟ್ಟು ಹೋಗಿತ್ತು. ಈ ಮಾಹಿತಿಯನ್ನು ತಿಪಟೂರು ಅರಣ್ಯ ವಿಭಾಗದ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಜಾಗೃತಗೊಂಡ ಅರಣ್ಯ ಇಲಾಖಾ ಸಿಬ್ಬಂದಿ ಆ ಪ್ರದೇಶದ ಸುತ್ತ ಮುತ್ತ ಎರಡು ಬೋನನ್ನು ಇರಿಸಿದ್ದರು.
ಮೊನ್ನೆಯಷ್ಠೇ ತಿಂದು ಬಿಟ್ಟಿದ್ದ ಮೇಕೆಯ ಮೃತ ದೇಹವನ್ನು ಬೋನಿನೊಳಗೆ ಹಾಕಲಾಗಿತ್ತು. ಸೋಮವಾರ ರಾತ್ರಿ ಮಾಂಸದ ವಾಸನೆ ಹಿಡಿದ ಚಿರತೆ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿನೊಳಗೆ ಹೋಗಿ ಲಾಕ್ ಆಗಿದೆ. ಇದರಿಂದಾಗಿ ಹತ್ತಾರು ಗ್ರಾಮಸ್ಥರು ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟಿದ್ದಾರೆ.
ಬೋನಿನೊಳಗೆ ಚಿರತೆ ಸಿಕ್ಕಿರುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ನೂರಾರು ಮಂದಿ ಚಿರತೆ ನೋಡಲು ಜಮಾಯಿಸಿದರು. ಜನರನ್ನು ನಿಯಂತ್ರಿಸಲು ಅರಣ್ಯ ಇಲಾಖಾ ಸಿಬ್ಬಂದಿಗೆ ಸಾಕುಸಾಕಾಗಿ ಹೋಯಿತು.
ಕೆಲವು ಯುವಕರು ಧೈರ್ಯಮಾಡಿ ಬೋನಿನ ಬಳಿ ತೆರಳಿ ಚಿರತೆಯೊಂದಿಗೆ ಸೆಲ್ಫಿ ಪಡೆಯಲು ಮುಂದಾದರು. ಚಿರತೆಯ ಆರ್ಭಟಕ್ಕೆ ದಂಗಾಗಿ ಹೋದರು.
ಸುಮಾರು ನಾಲ್ಕರಿಂದ ಐದು ವರ್ಷದ ಹೆಣ್ಣು ಚಿರತೆಯನ್ನು ಸುರಕ್ಷಿತ ಪ್ರದೇಶಕ್ಕೆ ಬಿಡಲು ತಿಪಟೂರು ಅರಣ್ಯ ಇಲಾಖೆಯ ಆರ್.ಎಫ್.ಒ ಮಧು ಸೇರಿದಂತೆ ಸಿಬ್ಬಂದಿಗಳು ಚಿರತೆಯನ್ನು ರಕ್ಷಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.





