ದಲಿತ ಸಮುದಾಯ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಆರೋಪದಲ್ಲಿ ಉಮೇಶ್ ನಾಯ್ಕ್ ಸೂಡನನ್ನು ಪೊಲೀಸರು ಕಾರ್ಕಳದಲ್ಲಿ ಬಂಧಿಸಿದ್ದಾರೆ.
“ಉಮೇಶ್ ನಾಯ್ಕ ಸೂಡನನ್ನು ಪೊಲೀಸರು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ” ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ಅರುಣ್ ತಿಳಿಸಿದ್ದಾರೆ.
ಹಿಂದೂ ಜಾಗರಣ ವೇದಿಕೆ(ಹಿಂಜಾವೇ)ಯ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಸಹ ಸಂಚಾಲಕ ಉಮೇಶ್ ನಾಯ್ಕ್ ದಕ್ಷಿಣ ಕನ್ನಡ ಮರಾಠಿ ಸಂರಕ್ಷಣಾ ಸಮಿತಿಯ ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಅಂಬೇಡ್ಕರ್ ಹಾಗೂ ದಲಿತರಿಗೆ ಅಪಮಾನಕರ ರೀತಿಯ ಆಡಿಯೋ ಸಂದೇಶವನ್ನು ಪೋಸ್ಟ್ ಮಾಡಿದ್ದು, ಅದು ವೈರಲ್ ಆದ ಬಳಿಕ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಉಮೇಶ್ ನಾಯ್ಕನನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿ ದಸಂಸ ಹಾಗೂ ದಲಿತ ಸಂಘ ಟನೆಗಳು ಅಲ್ಲಲ್ಲಿ ಪೊಲೀಸರಿಗೆ ಮನವಿಗಳನ್ನು ಸಲ್ಲಿಸಿ ಒತ್ತಾಯಿಸಿದ್ದವು. ಈ ನಡುವೆ ಪೊಲೀಸರು ಬಂಧಿಸಿದ್ದಾರೆಂದು ತಿಳಿದುಬಂದಿದೆ.
“ಆತನ ಮೇಲೆ ಭಾರತೀಯ ನ್ಯಾಯ ಸಂಹಿತೆ -2023ರ 353(2)ರ ಅಡಿ ಪ್ರಕರಣ ದಾಖಲಿಸಲಾಗಿದೆ. ಅಕ್ಟೋಬರ್ 10ರಂದು ದ ಕ ಜಿಲ್ಲೆಯ ಮೂಡುಬಿದಿರೆಯಲ್ಲಿರುವ ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ಗದ್ದಿಗೆ ಕರಾವಳಿ ಮರಾಠಿ ಸಮಾವೇಶ-2024ನ್ನು ಆಯೋಜಿಸಿದ್ದು, ಈ ಸಮಾವೇಶದ ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಅಂಬೇಡ್ಕರ್ ಫೋಟೊ ಮುದ್ರಿಸಿರುವುದು ಉಮೇಶ್ ನಾಯ್ಕನ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನೇ ನೆಪವಾಗಿರಿಸಿಕೊಂಡು ಅಂಬೇಡ್ಕರ್ ಹಾಗೂ ದಲಿತರನ್ನು ಅವಮಾನಿಸಿ ಉಮೇಶ್ ನಾಯ್ಕ ಸಾಮಾಜಿಕ ಜಾಲತಾಣದಲ್ಲಿ ವಾಯ್ಸ್ ಮೆಸೇಜ್ ಹರಿಯಬಿಟ್ಟಿರುವುದಾಗಿ ವರದಿಯಾಗಿತ್ತು.
ಉಮೇಶ ನಾಯ್ಕನದೆನ್ನಲಾದ ವೈರಲ್ ಆಡಿಯೋದಲ್ಲಿ “ಮರಾಠಿಗರು ದಲಿತರಲ್ಲ. ಆಮಂತ್ರಣ ಪತ್ರಿಕೆಯ ಅಂಬೇಡ್ಕರ್ ಫೋಟೊ ತೆಗೆದು ಶಿವಾಜಿಯ ಫೋಟೊ ಹಾಕಬೇಕು. ದಲಿತರು ದನದ ಹಾಗೂ ಕೋಣದ ಮಾಂಸ ತಿನ್ನುವವರು. ಸ್ಮಶಾನದಲ್ಲಿ ಮಲಗುವವರು. ಅಂಬೇಡ್ಕರ್ ಫೋಟೊ ಹಾಕಲು ಆತ ನಿಮ್ಮ ಅಪ್ಪನೇ. ಅಂಬೇಡ್ಕರ್ ಫೋಟೊ ತೆಗೆದು ಶಿವಾಜಿ ಪೋಟೊ ಹಾಕದಿದ್ದರೆ ಕರಾವಳಿ ಮರಾಠಿ ಸಮಾವೇಶಕ್ಕೆ ಬಹಿಷ್ಕಾರ ಹಾಕುತ್ತೇವೆ” ಎಂದು ಬೆದರಿಸಿದ್ದಾನೆ.
ಈ ಸುದ್ದಿ ಓದಿದ್ದೀರಾ? ರಾಮನಗರ | ಅಕ್ರಮ ಖಾತೆ ರದ್ದುಪಡಿಸುವಂತೆ ಆಗ್ರಹ; ಡಿಎಸ್ಎಸ್‌ನಿಂದ ಅನಿರ್ದಿಷ್ಟಾವಧಿ ಧರಣಿ
ಉಮೇಶ ನಾಯ್ಕನ ಹೇಳಿಕೆ ವೈರಲ್ ಆಗುತ್ತಿದ್ದಂತೆ ಆತನನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿಯು ಎಸ್‌ಪಿ ಅನುಪಸ್ಥಿತಿಯಲ್ಲಿ ಉಡುಪಿ ಪೊಲೀಸ್ ಉಪಾಧೀಕ್ಷಕ ಡಿ ಟಿ ಪ್ರಭುರಿಗೆ ಮನವಿ ಸಲ್ಲಿಸಿ ಒತ್ತಾಯಿಸಿತ್ತು.
ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್, ಶಾಮರಾಜ ಬಿರ್ತಿ, ಮಂಜುನಾಥ ಗಿಳಿಯಾರು, ಶಾಮಸುಂದರ ತೆಕ್ಕಟ್ಟೆ, ಕುಮಾರ್ ಕೋಟ, ಹರಿಶ್ಚಂದ್ರ ಕೆ ಡಿ, ಶಿವಾನಂದ ಬಿರ್ತಿ, ಶಿವಾನಂದ ಮೂಡಬೆಟ್ಟು ಮುಂತಾದವರು ನಿಯೋಗದಲ್ಲಿದ್ದರು.





