ಉಡುಪಿ ನಗರ ಪರವಾನಿಗೆ ಹೊಂದಿರುವ ರಿಕ್ಷಾ ಚಾಲಕರು ಕಳೆದ ಆರು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿರುವ ಸಮಸ್ಯೆ ಇದೀಗ ಮತ್ತೊಮ್ಮೆ ತೀವ್ರಗೊಂಡಿದೆ. ಹೈಕೋರ್ಟ್ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯ ಸುತ್ತೋಲೆಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವಂತೆ, ನಗರ ಪರವಾನಿಗೆ ಪಡೆದ ಚಾಲಕರು ನಗರ ಪ್ರದೇಶ ಹಾಗೂ ಪ್ರತೀ ನಿಲ್ದಾಣದ 7 ಕಿ.ಮೀ ವ್ಯಾಪ್ತಿಯೊಳಗೆ ಕೆಲಸ ಮಾಡಲು ಕಾನೂನಾತ್ಮಕ ಹಕ್ಕು ಹೊಂದಿದ್ದಾರೆ. ಆದರೂ ಈ ನಿಯಮವನ್ನು ಪಾಲನೆ ಮಾಡದ ಕೆಲ ನಿಲ್ದಾಣದಲ್ಲಿ ಚಾಲಕರ ಮೇಲೆ ಹಲ್ಲೆ, ಗೂಂಡಾಗಿರಿ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದ ಸಮಸ್ಯೆ ದಿನೇದಿನೇ ಹೆಚ್ಚುತ್ತಿದೆ ಎಂದು ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಟನೆ (ರಿ) ಆರೋಪಿಸಿದೆ.
ಹೆಚ್ಚಿನ ಬಾಡಿಗೆ ಲಭಿಸುವ ನಗರದ ದೊಡ್ಡ ನಿಲ್ದಾಣಗಳಲ್ಲಿ (ಸಿಟಿ, ಸರ್ವಿಸ್, ಕೆ.ಎಸ್.ಆರ್.ಟಿ.ಸಿ, ಬಿಗ್‌ಬಜಾರ್) ಚಾಲಕರು ಇತರ ನಿಲ್ದಾಣದ ಚಾಲಕರಿಗೆ ಕೆಲಸ ಮಾಡುವಂತಿಲ್ಲವೆಂದು ಅಡ್ಡಿಪಡಿಸುತ್ತಿದ್ದಾರೆ. ಅವರಿಂದ ಹಲ್ಲೆ, ಬೆದರಿಕೆ ಪ್ರಕರಣಗಳು ದಾಖಲಾಗಿದ್ದರೂ, ಕ್ರಮ ಕೈಗೊಳ್ಳದೇ ಬಾಧಿತರ ಮೇಲೆಯೇ ಎಫ್‌ಐಆರ್ ದಾಖಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಕಳೆದ ಆಗಸ್ಟ್ 18ರಂದು ನಡೆದ ಸಭೆಯಲ್ಲಿ, ನಿಲ್ದಾಣ ಚಾಲಕರು ತಮ್ಮ ನಿಲ್ದಾಣದಲ್ಲೇ ದುಡಿಯಬೇಕು ಎಂಬ ತೀರ್ಮಾನ ಹೊರಡಿಸಲಾಗಿದೆ. ಇದಲ್ಲದೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರೆಗೆ ಮಾತ್ರ ನಗರ ಪರವಾನಿಗೆ ಚಾಲಕರು ಕೆಲಸ ಮಾಡಬಹುದೆಂದು ಉಲ್ಲೇಖಿಸಿದ್ದು, ಹಗಲಿನಲ್ಲಿ ದುಡಿಯುವ ನಿಷೇಧದ ಕುರಿತು ಸ್ಪಷ್ಟ ಲಿಖಿತ ಉಲ್ಲೇಖ ಇಲ್ಲದಿದ್ದರೂ, ಕೆಲವು ನಿಲ್ದಾಣಗಳು ಅದನ್ನು ಕಾನೂನಿನಂತೆ ಅನ್ವಯಿಸುತ್ತಿರುವುದರಿಂದ ಗೊಂದಲ ಉಂಟಾಗಿದೆ.
ಆಶ್ರಯದಾತ ಯೂನಿಯನ್ ಪ್ರೆಸ್ ಕ್ಲಬ್‌ನಲ್ಲಿ ಪ್ರಕಟಿಸಿದ “ದೊಡ್ಡ ನಿಲ್ದಾಣಗಳಲ್ಲಿ 5, ಸಣ್ಣ ನಿಲ್ದಾಣಗಳಲ್ಲಿ 3 ಅಥವಾ 2 ರಿಕ್ಷಾಗಳು ಮಾತ್ರ ದುಡಿಯಬಹುದು” ಎಂಬ ಹೇಳಿಕೆ ಕಾನೂನಾತ್ಮಕವಾಗಿ ಅನಧಿಕೃತ. ಇಂತಹ ಪ್ರಕಟಣೆಗಳು ಚಾಲಕರ ಜೀವನೋಪಾಯವನ್ನು ಕಸಿದಿಕೊಳ್ಳುತ್ತದೆ. ಉಡುಪಿಯ ಒಟ್ಟು 58 ನಿಲ್ದಾಣಗಳಲ್ಲಿ ಕೇವಲ 4 ನಿಲ್ದಾಣಗಳು ಮಾತ್ರ ಉತ್ತಮ ಬಾಡಿಗೆಯನ್ನು ಕೊಡುತ್ತಿವೆ. ಉಳಿದ 54 ನಿಲ್ದಾಣಗಳಲ್ಲಿ ಬಾಡಿಗೆ ತುಂಬಾ ಕಡಿಮೆ. ದೊಡ್ಡ ನಿಲ್ದಾಣದ ಚಾಲಕರು ದಿನಕ್ಕೆ ರೂ.2500–3000 ವರೆಗೆ ಗಳಿಸುವಾಗ, ಸಣ್ಣ ನಿಲ್ದಾಣದ ಚಾಲಕರು ರೂ.800–1000 ಗಳಿಸಲು ಕಷ್ಟಪಡುತ್ತಿದ್ದಾರೆ. ಇದರಲ್ಲಿ ಇಂಧನ (ರೂ.300), ವಾಹನ ಸಾಲದ ಇಎಂಐ, ಮಕ್ಕಳ ಶಿಕ್ಷಣ, ಮನೆ ಖರ್ಚು ಇವೆಲ್ಲ ಸೇರಿ ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈದಿನ.ಕಾಮ್ ಜೊತೆ ಮಾತನಾಡಿದ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಟನೆಯ ಮೋಹನ್ ರಾವ್ ದೇಶಪಾಂಡೆ, ಮೊದಲೆಲ್ಲ ಯಾವ ನಿಲ್ದಾಣಕ್ಕೂ ಹೋದರು, ಎಲ್ಲೇ ಬಾಡಿಗೆ ಮಾಡಲು ಹೋದರೂ ಯಾರೂ ತಡೆ ಮಾಡ್ತಿರಲಿಲ್ಲ. ಯಾಕೆ ಬಂದಿದ್ದೀರಿ ಎಂದು ಕೇಳುವ ಬದಲು, ಮನೆ ಹೇಗಿದೆ? ಕುಟುಂಬ ಹೇಗಿದೆ? ಬಾಡಿಗೆ ಆಗಿದೆಯಾ? ಅಂತ ಕಷ್ಟ-ಸುಖ ವಿಚಾರ ವಿಚಾರಿಸುತ್ತಿದ್ದೆವು. ಆಗ ಯಾರಿಗೂ ‘ಇಲ್ಲಿ ನಿಲ್ಲಬೇಡಿ’, ‘ನಮ್ಮ ಸ್ಟಾಂಡ್‌ಗೆ ಬರಬೇಡಿ’ ಅಂತ ಹೇಳುವ ಪರಿಸ್ಥಿತಿಯೇ ಇರಲಿಲ್ಲ. ಈಗ ಮಾತ್ರ ಅದು ಬದಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನಗರಸಭೆ ಪರವಾನಿಗೆ ಹೊಂದಿರುವ ಚಾಲಕರು ತಮ್ಮ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ, ಅವರಿಗೆ ಯಾವುದೇ ನಿಲ್ದಾಣದಲ್ಲಿ ನಿಂತು ದುಡಿಯುವ ಹಕ್ಕು ಇರಬೇಕು. ನಗರ ಸಭೆಯ ನಿಲ್ದಾಣಗಳು ಯಾರ ಖಾಸಗಿ ಸೊತ್ತಲ್ಲ — ಅದು ನಗರ ಸಭೆಗೆ ಸೇರಿದ ಜಾಗ, ಎಲ್ಲರೂ ಅದರ ತೆರಿಗೆ ಕಟ್ಟುತ್ತಿದ್ದಾರೆ. ಹೀಗಿರುವಾಗ, ಯಾರಿಗೂ ನೀವು ಇಲ್ಲಿ ಬಾರದಿರಿ ಅಂತ ಹೇಳುವ ಅಧಿಕಾರ ಯಾರಿಗೂ ಇಲ್ಲ. ನಗರದ 7 ಕಿಲೋಮೀಟರ್ ವ್ಯಾಪ್ತಿಯೊಳಗೆ ಯಾವ ನಿಲ್ದಾಣದಲ್ಲಾದರೂ ಬಾಡಿಗೆ ಮಾಡಲು ನಾವು ಸಮ್ಮತಿಯಲ್ಲಿದ್ದೇವೆ. ಆಡಳಿತವು ಹೈಕೋರ್ಟ್ ಹಾಗೂ ಸಾರಿಗೆ ಇಲಾಖೆಯ ಆದೇಶಗಳನ್ನು ಗೌರವಿಸಿ, ಎಲ್ಲ ಚಾಲಕರಿಗೂ ಸಮಾನ ಅವಕಾಶ ಕಲ್ಪಿಸಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಈದಿನ.ಕಾಮ್ ಜೊತೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ಜಿಲ್ಲೆಯ ರಿಕ್ಷಾ ಚಾಲಕರ ಸಮಸ್ಯೆ ಇಂದಿನದಲ್ಲ, ಕಳೆದ ಹತ್ತು–ಹನ್ನೆರಡು ವರ್ಷಗಳಿಂದ ಇದು ನಡೆಯುತ್ತಲೇ ಬಂದಿದೆ. ಆದರೆ ಇದನ್ನು ಬಗೆಹರಿಸುವಲ್ಲಿ ಯಾವುದೇ ಅಧಿಕಾರಿಗಳು ಅಥವಾ ರಾಜಕಾರಣಿಗಳು ಮುಂದಾಗಿಲ್ಲ. ರಿಕ್ಷಾ ಚಾಲಕರು ಮತ್ತು ಮಾಲಕರು ಇಬ್ಬರೂ ಒಂದೇ ದುಡಿಯುವ ಸಮುದಾಯದವರು, ಒಂದೇ ತಾಯಿಯ ಮಕ್ಕಳು. ನೂರು, ಐವತ್ತು ರೂಪಾಯಿ ಬಾಡಿಗೆ ವಿಚಾರಕ್ಕಾಗಿ ಪರಸ್ಪರ ಕೇಸು ಹಾಕಿಕೊಳ್ಳುವುದು, ಆಟೋಗಳನ್ನು ಪೊಲೀಸರು ಮಟ್ಟುಗೋಲು ಹಾಕುವುದು ಅಸಹ್ಯಕರ ಸಂಗತಿ. ಮುಂದಿನ ದಿನಗಳಲ್ಲಿ ಇಂತಹ ವಿಷಯಗಳು ದೊಡ್ಡ ಮಟ್ಟದ ಘರ್ಷಣೆಗಳಿಗೆ ಕಾರಣವಾಗಬಹುದು, ಜೀವಹಾನಿಯ ಸಾಧ್ಯತೆಯೂ ಇದೆ. ಇದರ ಹೊಣೆಗಾರಿಕೆ ಪೊಲೀಸ್ ಇಲಾಖೆಯ ಮೇಲಿದೆ ಎಂದು ಎಚ್ಚರಿಸಿದರು.
ರಾಜಕೀಯ ಪ್ರಭಾವಕ್ಕೊಳಗಾಗದೆ, ಹೈಕೋರ್ಟ್ ಆದೇಶದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮಂಗಳೂರಿನಲ್ಲಿ ಈಗಾಗಲೇ ರೊಟೇಷನ್ ಪದ್ದತಿ ಜಾರಿಗೆ ಬಂದಿದೆ. ಅದೇ ಮಾದರಿಯನ್ನು ಉಡುಪಿಯಲ್ಲೂ ಜಾರಿಗೆ ತರಬೇಕೆಂದು ಜಿಲ್ಲಾಧಿಕಾರಿಗಳಿಗೆ ನಾನು ಮನವಿ ಮಾಡುತ್ತಿದ್ದೇನೆ. ರೊಟೇಷನ್ ಪದ್ದತಿ ಜಾರಿಗೆ ಬಂದರೆ ಸುಮಾರು 3,500 ಕುಟುಂಬಗಳು ಪ್ರಯೋಜನ ಪಡೆಯುತ್ತವೆ. ಇಲ್ಲದಿದ್ದರೆ 200–300 ಜನರಿಗಷ್ಟೇ ಲಾಭವಾಗುತ್ತದೆ. ಗೂಂಡಾಗಿರಿ, ಖಾಸಗೀಕರಣ ಅಥವಾ ಗುಂಪುಗಾರಿಕೆಯ ಮೂಲಕ ಆಟೋ ಚಾಲಕರನ್ನು ಪರಸ್ಪರ ಹೊಡೆದಾಡಿಕೊಳ್ಳುವಂತ ಸ್ಥಿತಿಗೆ ತಳ್ಳಬಾರದು. ನಾವು ಈ ವಿಚಾರವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಈಗಾಗಲೇ ತಂದಿದ್ದೇವೆ. ಆದರೂ ಸಮಸ್ಯೆ ಬಗೆಹರಿಯದಿದ್ದರೆ, ಕರ್ನಾಟಕ ರಕ್ಷಣಾ ವೇದಿಕೆ ಕಡೆಯಿಂದ ದೊಡ್ಡ ಮಟ್ಟದ ಹೋರಾಟ ಆರಂಭಿಸಲು ನಾವು ಹಿಂದೇಟು ಹಾಕುವುದಿಲ್ಲ ಎಂದು ಹೇಳಿದರು.

ಈದಿನ.ಕಾಮ್ ಜೊತೆ ಮಾತನಾಡಿದ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಟನೆಯ ಗೌರವಾಧ್ಯಕ್ಷ ವಿಠಲ ಜತ್ತನ್ನ, ಉಡುಪಿಯಲ್ಲಿ ರಿಕ್ಷಾ ವೃತ್ತಿಯಲ್ಲಿ ಹೆಚ್ಚಾಗಿ ಗಂಡಸರೇ ಕೆಲಸ ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮೂರು–ನಾಲ್ಕು ಮಹಿಳೆಯರು ಕೂಡ ರಿಕ್ಷಾ ಚಾಲಕಿಯರಾಗಿ ದುಡಿಯುತ್ತಿದ್ದಾರೆ. ದುರದೃಷ್ಟವಶಾತ್, ಅವರಿಗೆ ಯಾವುದೇ ನಿಲ್ದಾಣದಲ್ಲಿ ಅವಕಾಶ ನೀಡಲಾಗುತ್ತಿಲ್ಲ. ಮಹಿಳಾ ಚಾಲಕಿಯರಿಗೂ ನಿಲ್ದಾಣಗಳಲ್ಲಿ ಸಮಾನ ಅವಕಾಶ ನೀಡಬೇಕು. ಮಹಿಳೆಯರಿಗೆ ಈ ವೃತ್ತಿಯಲ್ಲಿ ಹೆಚ್ಚು ಅವಕಾಶ ನೀಡಿ, ಪ್ರೋತ್ಸಾಹ ನೀಡಿದರೆ ನಿರುದ್ಯೋಗ ಸಮಸ್ಯೆ ಪರಿಹಾರವಾಗಲು ಸಹಾಯವಾಗುತ್ತದೆ. ಹತ್ತು–ಹದಿನೈದು ಮಂದಿ ಮಹಿಳೆಯರು ರಿಕ್ಷಾ ವೃತ್ತಿಯಲ್ಲಿ ಆಸಕ್ತಿ ತೋರಿದರೆ, ಮುಂದೆ ಇನ್ನೂ ಹೆಚ್ಚು ಮಹಿಳೆಯರು ಈ ಕ್ಷೇತ್ರಕ್ಕೆ ಬರಬಹುದು. ಇದರಿಂದ ಸ್ವಾವಲಂಬನೆಗೂ ಅವಕಾಶ ದೊರೆಯುತ್ತದೆ ಮತ್ತು ಆರ್ಥಿಕವಾಗಿ ಅವರಿಗೆ ಸಹಾಯಕವಾಗುತ್ತದೆ ಎಂದು ಹೇಳಿದರು.

ಚಾಲಕರ ಸಂಘಟನೆಯಿಂದ ಜಿಲ್ಲಾಡಳಿತಕ್ಕೆ ಒತ್ತಾಯ
ನಗರ ಪರವಾನಿಗೆ ಚಾಲಕರಿಗೆ ಎಲ್ಲಾ ನಿಲ್ದಾಣಗಳಲ್ಲಿ ರೊಟೇಶನ್ ಪದ್ಧತಿಯಲ್ಲಿ ದುಡಿಯುವ ಅವಕಾಶ ಕಲ್ಪಿಸಬೇಕು.
ಹೊರಪರವಾನಿಗೆ ಹೊಂದಿರುವ ಚಾಲಕರಿಗೆ ಒಂದು ತಿಂಗಳ ಗಡುವಿನೊಳಗೆ ನಗರ ಪರವಾನಿಗೆ ಪರಿವರ್ತನೆ ಅವಕಾಶ ನೀಡಬೇಕು. ಜಿಲ್ಲೆಯ ನಿಲ್ದಾಣಗಳಲ್ಲಿ ಉಂಟಾಗುತ್ತಿರುವ ಗೂಂಡಾಗಿರಿ, ಹಲ್ಲೆ ಪ್ರಕರಣಗಳಿಗೆ ಪೋಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು.
ಚಾಲಕರ ಹೊಕ್ಕೊತ್ತಾಯಕ್ಕೆ ಜಿಲ್ಲಾಡಳಿತವು ಸ್ಪಷ್ಟ ಕಾನೂನು ಕ್ರಮ ಕೈಗೊಳ್ಳದಿದ್ದರೆ, ಮತ್ತೊಮ್ಮೆ ಹೈಕೋರ್ಟಿಗೆ ಮೊರೆ ಹೋಗುವುದಾಗಿಯೂ ಸಂಘಟಕರು ತಿಳಿಸಿದ್ದಾರೆ. ನಗರ ಪರವಾನಿಗೆ ಚಾಲಕರ ಹಕ್ಕು ಹಾಗೂ ಜೀವನೋಪಾಯ ಕಾದು ಕಳೆಯುತ್ತಿರುವ ಈ ಪರಿಸ್ಥಿತಿಯಲ್ಲಿ, ಜಿಲ್ಲಾಡಳಿತ ಮತ್ತು ನಗರಸಭೆ ಮಧ್ಯಸ್ಥಿಕೆ ಅಗತ್ಯವಾಗಿದೆ. ಹೈಕೋರ್ಟ್ ಆದೇಶವಿದ್ದರೂ, ನೆಲಮಟ್ಟದಲ್ಲಿ ಅದರ ಅನುಷ್ಠಾನ ಕಂಡುಬರದಿರುವುದು ಆಡಳಿತದ ನಿರ್ಲಕ್ಷ್ಯವೋ ಎಂಬ ಪ್ರಶ್ನೆ ಈಗ ರಿಕ್ಷಾ ಚಾಲಕರ ಬಾಯಿಂದ ಕೇಳಿಬರುತ್ತಿದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




