ಉಡುಪಿ ನಗರದ ಕಲ್ಸಂಕ ಜಂಕ್ಷನ್ ಸಮೀಪದ ಪಾಕಶಾಲೆ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೈನರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದು ಸಂಜೆ ಸಂಭವಿಸಿದೆ.
ಮೃತ ಯುವಕನನ್ನು ಮಣಿಪಾಲ ನಿವಾಸಿ ಅವಿನಾಶ್ (19) ಎಂದು ಗುರುತಿಸಲಾಗಿದೆ.
ಉಡುಪಿಯಿಂದ ಮಣಿಪಾಲ ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿಯು ಮುಂದೆ ಸಾಗುತ್ತಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಲಾರಿಯ ಢಿಕ್ಕಿಯಿಂದ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದು, ಈ ವೇಳೆ ಲಾರಿಯ ಚಕ್ರವು ಸವಾರನ ತಲೆಯ ಮೇಲೆ ಹರಿದ ಪರಿಣಾಮ ಅವಿನಾಶ್ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಉಡುಪಿ ಸಂಚಾರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ಸಹಕಾರದಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.
ಈ ಸಂಬಂಧ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





