ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 70ನೇ ಪರಿನಿರ್ವಾಣ ದಿನದ ಅಂಗವಾಗಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಭಾವಪೂರ್ಣ ಕಾರ್ಯಕ್ರಮಗಳು ನಡೆಯಿತು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬೈಂದೂರು ತಾಲೂಕು ಘಟಕ, ತಾಲೂಕು ಒಕ್ಕೂಟ, ತಾಲೂಕು ಒಕ್ಕೂಟ ಬೈಂದೂರು ಹಾಗೂ ತಾಲೂಕು ಮಹಿಳಾ ಒಕ್ಕೂಟ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಬೈಂದೂರು ತಾಲೂಕು ಸೌಧದಲ್ಲಿ ಮಹಾ ಪರಿನಿರ್ವಾಣ ದಿನವನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಊರಿನ ಅನೇಕ ಗಣ್ಯರು, ಹೋರಾಟಗಾರರು, ಸಮಾಜ ಸೇವಕರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ ಅಂಬೇಡ್ಕರ್ ಅವರ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳನ್ನು ಸ್ಮರಿಸಿದರು.
ಸಾಮಾಜಿಕ ಹೋರಾಟಗಾರ್ಟಿ ಇಂದಿರಾರವರು ಮಾತನಾಡಿ, “ಡಾ. ಅಂಬೇಡ್ಕರ್ ಅವರ ಅಸಮಾನ ಹೋರಾಟ, ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಕುರಿತು ನೀಡಿದ ಕೊಡುಗೆಗಳು ಇಂದಿಗೂ ದಿಕ್ಕು ತೋರುವಂತಿವೆ. ಯುವ ಪೀಳಿಗೆ ಅವರು ಬೋಧಿಸಿದ ಮೌಲ್ಯಗಳನ್ನು ಅಳವಡಿಸಿಕೊಂಡಾಗಲೇ ನಿಜವಾದ ಸಮಾಜ ಪರಿವರ್ತನೆ ಸಾಧ್ಯ,” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಡಾ. B.R. ಅಂಬೇಡ್ಕರ್ ಮಹಿಳಾ ಸಂಘ (ರಿ), ಬೈಂದೂರು ವತಿಯಿಂದ ಮಾನವೀಯ ಸೇವೆಯ ಉದಾಹರಣೆಯಾದ ವಿಶೇಷ ಕಾರ್ಯಕ್ರಮವನ್ನೂ ಆಯೋಜಿಸಲಾಯಿತು. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಬೈಂದೂರಿನ ಶ್ರೀ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ಸುಮಾರು 300 ವಿದ್ಯಾರ್ಥಿಗಳಿಗೆ ಹಣ್ಣು-ಹಂಪಲು ವಿತರಣೆ ನೆರವೇರಿಸಲಾಯಿತು. ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆಯ ಮೂಲಕ ಸಮಾಜಸೇವೆಯ ಸಂದೇಶ ನೀಡಿದ ಈ ಕಾರ್ಯಕ್ರಮಕ್ಕೆ ಶಾಲಾ ಸಿಬ್ಬಂದಿ, ಸಂಘದ ಕಾರ್ಯಕರ್ತೆಯರು ಹಾಗೂ ಸ್ಥಳೀಯರು ಸಹಕಾರ ನೀಡಿದರು. ಎರಡು ಕಾರ್ಯಕ್ರಮಗಳೂ ಶಾಂತಿಯುತವಾಗಿ, ಭಾವಪೂರ್ಣವಾಗಿ ನೆರವೇರಿದ್ದು, ಡಾ. ಅಂಬೇಡ್ಕರ್ ಅವರ ಸಮಾಜ ಪರಿವರ್ತನೆ ಸಾದಿಸಿದ ತತ್ವಗಳನ್ನು ಪುನರ್‌ಸ್ಮರಣೆ ಮಾಡುವ ವೇದಿಕೆಯಾಯಿತು.






