ಮಣಿಪಾಲದ ಶಿವಳ್ಳಿ ಗ್ರಾಮದ ಮಾಂಡವಿ ಪರ್ಲ್ ಸಿಟಿ ಅಪಾರ್ಟ್‌ಮೆಂಟ್ ನಿವಾಸಿ ಸಂತೋಷ್ ಸಿ. ಕಾಮತ್ (60) ಎಂಬವರಿಗೆ ಕ್ರೆಡಿಟ್ ಕಾರ್ಡ್ ನೀಡುವ ನೆಪದಲ್ಲಿ ಅಪರಿಚಿತರು ಸುಮಾರು ₹2.47 ಲಕ್ಷ ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಡಿಸೆಂಬರ್ 15 ರಂದು ಸಂಜೆ ಸುಮಾರು 6 ಗಂಟೆಗೆ ಸಂತೋಷ್ ಕಾಮತ್ ತಮ್ಮ ನಿವಾಸದಲ್ಲಿರುವ ವೇಳೆ, HDFC ಬ್ಯಾಂಕಿನ ಕ್ರೆಡಿಟ್ ಕಾರ್ಡ್ ವಿಭಾಗದ ಚಾನೆಲ್ ಪಾರ್ಟನರ್ ಎಂದು ಪರಿಚಯಿಸಿಕೊಂಡ MBYC11 ಸಂಸ್ಥೆಯ ಸೇಲ್ಸ್ ಅಸೋಸಿಯೇಟ್ ಆರೋಹಿ ಶರ್ಮ ಎಂಬವರು 7348179208 ಸಂಖ್ಯೆಯಿಂದ ವಾಟ್ಸಪ್ ಕರೆ ಮಾಡಿದ್ದರು. ಕರೆ ವೇಳೆ HDFC ಬ್ಯಾಂಕಿನ ರೆಗಾಲಿಯಾ ಗೋಲ್ಡ್ ಕ್ರೆಡಿಟ್ ಕಾರ್ಡ್ ನೀಡುವುದಾಗಿ ಹೇಳಿ, ವಾಟ್ಸಪ್ ವಿಡಿಯೋ ಕರೆ ಮೂಲಕ ಪಾನ್ ಕಾರ್ಡ್ ತೋರಿಸುವಂತೆ ಕೇಳಿಕೊಂಡಿದ್ದಾರೆ.
ಕರೆ ಮಾಡಿದವರ ಮಾತನ್ನು ನಂಬಿದ ಸಂತೋಷ್ ಸಿ. ಕಾಮತ್ ತಮ್ಮ ಪಾನ್ ಕಾರ್ಡ್ ಅನ್ನು ತೋರಿಸಿದ್ದು, ನಾಲ್ಕು ದಿನಗಳಲ್ಲಿ ನೋಂದಾಯಿತ ವಿಳಾಸಕ್ಕೆ ಕಾರ್ಡ್ ತಲುಪುತ್ತದೆ ಎಂದು ತಿಳಿಸಿ ಕರೆ ಕಡಿತಗೊಳಿಸಲಾಗಿದೆ.
ಆದರೆ, ಒಂದು ಗಂಟೆಯ ಬಳಿಕ ತಮ್ಮ ಮೂರು ಕ್ರೆಡಿಟ್ ಕಾರ್ಡ್‌ಗಳನ್ನು ಪರಿಶೀಲಿಸಿದಾಗ, ಒಟ್ಟು ₹2,47,283 ಮೊತ್ತ ಡೆಬಿಟ್ ಆಗಿರುವುದು ಕಂಡುಬಂದಿದೆ. ಪಿರ್ಯಾದಿದಾರರಿಗೆ ತಿಳಿಯದಂತೆ ಯಾರೋ ಅಪರಿಚಿತರು ಮೋಸದಿಂದ ಹಣ ವರ್ಗಾವಣೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





