ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆಬೈಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಧರ್ಮಸ್ಥಳ ಸ್ವಸಹಾಯ ಸಂಘದ ಸೇವಾ ಪ್ರತಿನಿಧಿಯಾಗಿ ಕೆಲಸ ಮಾಡಿಕೊಂಡಿದ್ದ ಮಹಿಳೆ ಜತೆಗೆ ಅಸಭ್ಯವಾಗಿ ವರ್ತಿಸಿದ್ದು, ಮುತ್ತು ಕೊಟ್ಟ ಕುರಿತು ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲಾಗಿದೆ.
ದೂರುದಾರೆ ಧರ್ಮಸ್ಥಳದ ಧರ್ಮ ಸಂರಕ್ಷಣಾಯಾತ್ರೆಯ ಸಭೆಯ ಬಗ್ಗೆ ರಟ್ಟಾಡಿ ಶ್ರೀ ರಟ್ಟೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮುಖ್ಯಸ್ಥ, “ನವೀನಚಂದ್ರ ಶೆಟ್ಟಿ ರಟ್ಟಾಡಿಗೆ ಕಾರ್ಯಕ್ರಮ ಆಹ್ವಾನ ಪತ್ರಿಕೆ ಕೊಡಲು ತೆರಳಿದ್ದರು. ಕುಂದಾಪುರ ತಾಲೂಕು ರಟ್ಟಾಡಿ ಗ್ರಾಮದ ಮಣಿಮಕ್ಕಿ ಎಂಬಲ್ಲಿಯ ಮನೆಗೆ ಬರುವಂತೆ ಕರೆದ ಆರೋಪಿ ಆಹ್ವಾನ ಪತ್ರಿಕೆ ಪಡೆಯುವಾಗ ಯುವತಿಯ ಕೈಯನ್ನು ಸ್ವರ್ಶಿಸಿದ್ದಾನೆ. ಇದರಿಂದ ಯುವತಿಗೆ ಮುಜುಗರ ಉಂಟಾಗಿದ್ದು, ನಂತರ ಆಕೆ ಹೊರಡಲು ಅನುವಾದಾಗ ಎರಡು ನಿಮಿಷ ನಿಲ್ಲುವಂತೆ ಒತ್ತಾಯಿಸಿದ ಆರೋಪಿ ಹತ್ತಿರಕ್ಕೆ ಎಳೆದುಕೊಂಡು ಬಲ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ. ಗಾಬರಿಗೊಂಡ ಯುವತಿ ಅಲ್ಲಿಂದ ತಕ್ಷಣ ಎದ್ದು ಹೊರಟರೂ ಮನೆಗೆ ಬರುವಂತೆ ಹೇಳುತ್ತಾ ಮನೆಯ ಬಾಗಿಲವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾಗಿ ಯುವತಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಅಮಾಸೆಬೈಲು ಠಾಣೆಯಲ್ಲಿ ಅ.ಕ್ರ .ನಂ. 29-2025 ಕಲಂ 75 ಬಿ. ಎನ್. ಎಸ್ ನಂತೆ ಪ್ರಕರಣ ದಾಖಲಾಗಿದೆ.
ಕರಾವಳಿಯಲ್ಲಿ ಧರ್ಮ ರಕ್ಷಕರು ರಾಕ್ಷಸರಾಗಿದ್ದಾರೆ – ಕೋಟ ನಾಗೇಂದ್ರ ಪುತ್ರನ್
ಬಿಜೆಪಿಯ ನಾಯಕ, ಮಾಜಿ ತಾಲೂಕು ಪಂಚಾಯ್ತ್ ಸದಸ್ಯ, ಧರ್ಮಸ್ಥಳ ಜನಜಾಗೃತಿ ಸಂಘದ ಮಾಜಿ ಜಿಲ್ಲಾ ಅಧ್ಯಕ್ಷ, ರಟ್ಟಾಡಿ ರಟ್ಟೆಶ್ವರ ದೇವಸ್ಥಾನದ ಆಡಳಿತ ಮುಕ್ತೇಶ್ವರ, ನವೀನ್ ಚಂದ್ರ ಶೆಟ್ಟಿಯಂತಹ ಕಾಮ ಕೀಚಕನಿಂದ ಕುಂದಾಪುರ ವಿಧಾನಸಭಾ ಕ್ಷೇತ್ರದ ಹಿಂದೂ ಗಳಿಗೆ ಕಪ್ಪು ಮಸಿ ಬಳಿದಂತಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಪ್ರತಿಕ್ರಿಯಿಸಿದ್ದಾರೆ.
ಈ ಪ್ರಕರಣ ಬೆಳಕಿಗೆ ಬರದಂತೆ ಶಾಸಕರು ಪ್ರಯತ್ನ ಪಟ್ಟಿದ್ದು ಮಹಿಳೆಯರಿಗೆ ಮಾಡಿದ ದೊಡ್ಡ ಅಪಮಾನ, ಕುಂದಾಪುರ ಶಾಸಕರ ಬಗ್ಗೆ ಅತ್ಯಂತ ಗೌರವ ಇತ್ತು, ನಿನ್ನೆಯ ಬೆಳವಣಿಗೆ ಕಾಮಗ್ರಸ್ಥನ ಬೆನ್ನಿಗೆ ನಿಂತು ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ಪಟ್ಟಿರುವುದು ನಮ್ಮ ಕಿರಣ್ ಕುಮಾರ್ ಕೊಡ್ಗಿ ಶಾಸಕರಿಗೆ ಶೋಭೆಯಲ್ಲ ಎಂದಿದ್ದಾರೆ.
ಧರ್ಮ ರಕ್ಷಣೆ ಹೆಸರಿನಲ್ಲಿ ಧರ್ಮಸ್ಥಳ ಸಂಘದ ಸದಸ್ಯೆಯನ್ನೆ ಮನೆಗೆ ಕರೆಸಿ ಬಲತ್ಕಾರ ಮಾಡಲು ಮುಂದಾಗಿರುವ ಈ ಬಿಜೆಪಿ ನಾಯಕರಿಂದ ಧರ್ಮ ರಕ್ಷಣೆ ಅಸಾಧ್ಯ. ನಮ್ಮ ಧರ್ಮ ಪುರಾತನ ಕಾಲ ದಿಂದ ಸುಸಜ್ಜಿತವಾಗಿದೆ, ನಿಮ್ಮಂತ ಕಾಮಂದರಿಂದ ನಮ್ಮ ಧರ್ಮ ರಕ್ಷಣೆ ಅಗತ್ಯ ಇಲ್ಲ, ಎಷ್ಟೇ ಒತ್ತಡಗಳು ಇದ್ದರು ಇಂತಹ ಕಾಮಂದರ ಮೇಲೆ ಪ್ರಕರಣ ದಾಖಲಿಸಿದ ಪೊಲೀಸ್ ಇಲಾಖೆ ಹಾಗೂ ಅನ್ಯಾಯಕ್ಕೆ ಒಳಗಾದ ಸಂತ್ರಸ್ಥೆ ಅವರಿಗೆ ಧನ್ಯವಾದಗಳು ಎಂದಿದ್ದಾರೆ.
ಮಹಿಳೆಯ ಮಾನಭಂಗ ಯತ್ನ ಬಿಜೆಪಿ ಮುಖಂಡನನ್ನು ಬಂಧಿಸಲು ಸಿಪಿಎಂ ಆಗ್ರಹ
ಅಮಾಸೆಬೈಲು ಮಾಜಿ ತಾಲೂಕು ಪಂಚಾಯತ್ ಸದಸ್ಯ ಹಾಗೂ ಉಡುಪಿ ಜಿಲ್ಲಾ ಧರ್ಮಸ್ಥಳ ಯೋಜನೆಯ ಜನಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ನವೀನ್ ಚಂದ್ರಶೆಟ್ಟಿ ಅಮಾಸೆಬೈಲು ಧರ್ಮಸ್ಥಳ ಸಂಘದ ಸದಸ್ಯೆಯನ್ನು ಧರ್ಮ ರಕ್ಷಣೆಯ ಕೆಲಸದ ಮೇಲೆ ಶುಕ್ರವಾರ ಮನೆಗೆ ಕರೆಯಿಸಿ ಮಾನಭಂಗಕ್ಕೆ ಯತ್ನಿಸಿದರೆಂದು ವರದಿಯಾಗಿದ್ದು ಇದನ್ನು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಖಂಡಿಸುತ್ತದೆ ಎಂದು ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.
ನವೀನ್ ಚಂದ್ರಶೆಟ್ಟಿ ಧರ್ಮ ಸಂರಕ್ಷಣೆಯ ಯಾತ್ರೆಗೆ ಜನ ಸೇರಿಸಲು ಜವಾಬ್ದಾರಿ ವಹಿಸಿ ಮನೆಮನೆಗೆ ಕರಪತ್ರ ಹಂಚಲು ಧರ್ಮಸ್ಥಳ ಸಂಘದ ಸದಸ್ಯೆ ವಿವಾಹಿತ ಮಹಿಳೆಗೆ ಕರೆ ಮಾಡಿ ಕರಪತ್ರವನ್ನು ತನ್ನ ಮನೆಗೆ ತಂದುಕೊಡಲು ಹೇಳಿದ್ದ ಎನ್ನಲಾಗಿದೆ. ಯಾರೂ ಇಲ್ಲದ ಮನೆಯಲ್ಲಿ ಆರೋಪಿಯು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದಾಗ ಮಹಿಳೆ ತಪ್ಪಿಸಿಕೊಂಡು ತನ್ನ ಮನೆಯವರಿಗೆ ತಿಳಿಸಿದ್ದಾಳೆ.
ಸಂತ್ರಸ್ಥ ಮನೆಯವರು ಅಮಾಸೆಬೈಲು ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ ಎಂದು ಪೋಲೀಸ್ ಇಲಾಖೆ ತಿಳಿಸಿದೆ. ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಆರೋಪಿ ನವೀನ್ ಚಂದ್ರಶೆಟ್ಟಿ ಪರ ನಿಂತು ಪಂಚಾಯಿತಿ ಮಾಡಲು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಇದು ಖಂಡನೀಯವಾಗಿದೆ. ಆರೋಪಿ ನವೀನ್ ಚಂದ್ರ ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿದೆ.
ಸ್ವತಃ ಬಾದಿತ ಮಹಿಳೆಯ ಕಡೆಯಿಂದ ದೂರು ದಾಖಲಾಗಿರುವುದರಿಂದ ತಕ್ಷಣವೇ ಆರೋಪಿ ಎಲ್ಲಿರುವರೆಂದು ಪತ್ತೆ ಮಾಡಿ ಶಿಕ್ಷೆಗೆ ಗುರಿಪಡಿಸಿ ಮಹಿಳೆಗೆ ನ್ಯಾಯ ಒದಗಿಸಬೇಕು ಎಂದು ಸಿಪಿಎಂ ಆಗ್ರಹಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





