ಉಡುಪಿ ಜಿಲ್ಲೆಯಲ್ಲಿನ ಸಮಾಜ ಕಲ್ಯಾಣ ಇಲಾಖೆ ಮತ್ತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಎನ್ನುವ ಎರಡು ಸರಕಾರಿ ಇಲಾಖೆಗಳು ಅಧಿಕಾರಿಗಳಿಲ್ಲದೆ ಮಲಗಿದಲ್ಲೇ ಸತ್ತಿವೆ! ಸರಕಾರಿ ಆಸ್ಪತ್ರೆಗಳಲ್ಲಿನ ವ್ಯವಸ್ಥೆ ದೇವರಿಗೇ ಪ್ರೀತಿ! ಜಿಲ್ಲೆಯ ಗ್ರಾಮ ಮತ್ತು ತಾಲೂಕು ಪಂಚಾಯತ್ ಗಳನ್ನು ಹೇಳುವವರು, ಕೇಳುವವರೇ ಇಲ್ಲ.
ಹೌದು ಮೊದಲಿನಿಂದಲೂ ನಿದ್ದೆಯಲ್ಲೇ ಇರುತಿದ್ದ ಈ ಇಲಾಖೆಗಳಲ್ಲಿ ಅಧಿಕಾರಿಗಳೇ ಇಲ್ಲ! ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಇಲಾಖೆಯ ಬಗ್ಗೆ ಯಾವುದೇ ಅನುಭವ ಇಲ್ಲದ ಓರ್ವ ಅಧಿಕಾರಿ ಪ್ರಭಾರವಾಗಿ ಕಾಟಾಚಾರಕ್ಕೆ ಕಾರ್ಯ ನಿರ್ವಹಿಸುತ್ತಿದ್ದರೆ, ಉಡುಪಿ ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಅಧಿಕಾರಿಗಳೇ ಇಲ್ಲ! ಇನ್ನು ಸರಕಾರಿ ಆಸ್ಪತ್ರೆಗಳಿಗೆ ಬಡವರು ಚಿಕಿತ್ಸೆಗೆಂದು ಹೋದರೆ ವೈದ್ಯರು ಸಿಗುವುದೇ ಇಲ್ಲ! ಸಿಕ್ಕಿದರೂ ಸರಿಯಾದ ಔಷಧ ಕೊಡದೆ ಖಾಸಗಿ ಮೆಡಿಕಲ್ ಗಳಿಗೆ ಚೀಟಿ ಬರೆದು ಕೊಟ್ಟು ಕೈ ತೊಳೆದು ಕೊಳ್ಳುತ್ತಾರೆ.
ಮೂರು ಬಾರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರು ಕರೆದ ಜಿಲ್ಲಾ ದಲಿತರ ಕುಂದು ಕೊರತೆಗಳ ಸಭೆಯಲ್ಲಿ ಎಸ್ ಪಿ ಯವರ ಎದುರು ದಲಿತ ಮುಖಂಡರು ಈ ಗಂಭೀರ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದರೂ, ಮನವಿ ಮಾಡಿದರೂ ಧ್ವನಿಗೆ, ಮನವಿಗೆ ಜಿಲ್ಲಾಡಳಿತದಿಂದ ಕವಡೆ ಕಾಸಿನ ಕಿಮ್ಮತ್ತಿಲ್ಲ!
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಐದು ಗ್ಯಾರೆಂಟಿಗಳ ಮೂಲಕ ಉತ್ತಮ ಆಡಳಿತ ನಡೆಸುತ್ತಿದ್ದರೂ ಉಡುಪಿ ಜಿಲ್ಲೆಯಲ್ಲಿನ ಜಿಲ್ಲಾಡಳಿತ ತನ್ನ ಅಧೀನದ ಇಲಾಖೆಗಳ ಮೇಲೆ ಹಿಡಿತ ಇಲ್ಲದೆ ಜನ ಸಾಮಾನ್ಯರು ತಮ್ಮ ಕೆಲಸ ಕಾರ್ಯಗಳಿಗೆ ಪರದಾಡುವಂತ ಪರಿಸ್ಥಿತಿ ನಿರ್ಮಾಣ ಮಾಡಿದೆ. ಇದರಿಂದ ಜಿಲ್ಲೆಯಲ್ಲಿ ಸರಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶ ಜಿಲ್ಲಾಡಳಿತಕ್ಕೆ ಇದೆಯೇ ಅನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಜಿಲ್ಲೆಯ ದಲಿತ ಸಮುದಾಯದ ಬೆನ್ನೆಲುಬಾದ ಈ ಎರಡು ಇಲಾಖೆಗಳು ಜಿಲ್ಲೆಯಲ್ಲಿ ಇದ್ದೂ ಸತ್ತಂತೆ ಮಲಗಿವೆ. ದಲಿತ ಸಮುದಾಯದ ಮತ್ತು ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳನ್ನು ಮಾಡದೆ ಸುಮ್ಮನೆ ಸರಕಾರದ ಸಂಬಳವನ್ನು ತಿಂದು ತೇಗುತ್ತಿರುವ ಈ ಇಲಾಖೆಗಳ ವಿರುದ್ಧ ದಲಿತ ಸಮುದಾಯದಲ್ಲಿ ಹತಾಶೆ, ಆಕ್ರೋಶ ಮಡುವುಗಟ್ಟಿದೆ. ಇದೇ ರೀತಿ ಇಲಾಖೆಗಳ ಚಾಳಿ ಮುಂದುವರಿದರೆ ದಲಿತರು ಜಿಲ್ಲೆಯಲ್ಲಿ ಬೀದಿಗಿಳಿಯುವ ದಿನ ದೂರವಿಲ್ಲ.
ವರದಿ – ಶ್ರೀನಿವಾಸ್ ವಡ್ಡರ್ಸೆ (ಸಿಟಿಝನ್ ಜರ್ನಲಿಸ್ಟ್, ಉಡುಪಿ )





