ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಸಾಲುಮರದ ತಿಮ್ಮಕ್ಕ ವಿಷಯಾಧಾರಿತ ‘ಫಲಪುಷ್ಪ ಪ್ರದರ್ಶನ–2026’ ಅನ್ನು ಇದೇ ಜನವರಿ 26ರಿಂದ 28ರವರೆಗೆ ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆಯ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರ)ದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 26ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಳರ್ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದು, ಉಡುಪಿ ಶಾಸಕ ಯಶ್ನಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಸುಮಾರು 7000 ಸಂಖ್ಯೆಯ 26 ಜಾತಿಯ ಹೂವಿನ ಗಿಡಗಳನ್ನು ಅಲಂಕರಿಸಲಾಗುವುದು. ಪೆಟೂನಿಯ, ಸೆಲೋಷಿಯಾ, ಸಾಲಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಚೈನಾ ಅಸ್ಟರ್, ಬಾಲ್ಬಮ್, ತೊರೇನಿಯ, ಗುಲಾಬಿ, ಟೆಕೋಮಾ, ದಾಸವಾಳ, ಪ್ಯಾನ್ಸಿ, ಇಂಪೇಷಿಯನ್ಸ್ ಸೇರಿದಂತೆ ವಿವಿಧ ಜಾತಿಯ ಹೂಗಿಡಗಳ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿ ಸಾಲುಮರದ ತಿಮ್ಮಕ್ಕ ಅವರ ಜೀವನ ಹಾಗೂ ಸಾಧನೆಗಳ ಕುರಿತ ಕಲಾಕೃತಿಗಳ ಪ್ರದರ್ಶನ ಇರಲಿದೆ. ಗುಲಾಬಿ, ಸೇವಂತಿಗೆ ಮುಂತಾದ ಹೂವಿನಿಂದ ತಯಾರಿಸಿದ ವಿವಿಧ ಕಲಾಕೃತಿಗಳು, ತೆಂಗಿನ ಗರಿಗಳಿಂದ ನಿರ್ಮಿತ ಜಾನೂರ್ ಆರ್ಟ್ ಕಲಾಕೃತಿಗಳು, ಸೆಲ್ಪಿ ಝನ್, ಡೋರೇಮನ್ ಮತ್ತು ಮಶ್ರೂಮ್, ಕೋನ್ ಪ್ರದರ್ಶನಗಳು ವೀಕ್ಷಕರನ್ನು ಸೆಳೆಯಲಿವೆ ಎಂದು ಹೇಳಿದರು.
ಇದೇ ವೇಳೆ ವಿವಿಧ ಅಲಂಕಾರಿಕ ಗಿಡಗಳ ಪ್ರದರ್ಶನ, ಹೂವಿನ ಕುಂಡಗಳ ಆಕರ್ಷಕ ಜೋಡಣೆ, ವಿವಿಧ ತರಕಾರಿಗಳ ಮಾದರಿ ಕೈತೋಟ ಹಾಗೂ ಮೈಕ್ರೋ ಗ್ರೀನ್ಸ್ ಕುರಿತ ಪ್ರಾತ್ಯಕ್ಷತೆಗಳನ್ನು ಆಯೋಜಿಸಲಾಗಿದೆ. ಕೃಷಿಗೆ ಸಂಬಂಧಿಸಿದ ವಿವಿಧ ಇಲಾಖೆಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು, ನರ್ಸರಿ ಗಿಡಗಳ ಮಾರಾಟ, ಕೃಷಿ ಪರಿಕರಗಳು ಹಾಗೂ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಫಲಪುಷ್ಪ ಪ್ರದರ್ಶನವನ್ನು ಸಾರ್ವಜನಿಕರು ಬೆಳಿಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ವೀಕ್ಷಿಸಬಹುದಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್ ಉಪಸ್ಥಿತರಿದ್ದರು.





