ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಯುಎಪಿಎ ಕಾಯ್ದೆಯಡಿ ಕೇಸು ದಾಖಲಿಸಿ ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲೆ, ಸಹಬಾಳ್ವೆ ವೇದಿಕೆ ಹಾಗೂ ಉಡುಪಿಯ ವಿವಿಧ ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಶುಕ್ರವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಇಂದು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಇದು ಕೊಳಕು ಮನಸ್ಸಿನ ಕುಕೃತ್ಯ. ಆರ್‌ಎಸ್‌ಎಸ್ ತನ್ನ 100 ವರ್ಷಗಳ ಆಚರಣೆಯ ಸಮಯದಲ್ಲಿ ದೇಶದೊಳಗೆ ಸಾಮಾಜಿಕ ವಿಭಜನೆ ಉಂಟುಮಾಡುವ ಹಾಗೂ ಜನರ ಗಮನ ಬೇರೆಡೆಗೆ ತಿರುಗಿಸುವ ನಿಟ್ಟಿನಲ್ಲಿ ಇಂತಹ ಕೃತ್ಯಗಳನ್ನು ಮುನ್ನಲೆಗೆ ತರುತ್ತಿದೆ. ದೇಶವನ್ನು ಬ್ರಾಹ್ಮಣೀಕರಣ ಮಾಡುವ ಭಾಗವಾಗಿ ಈ ಘಟನೆಗಳು ನಡೆಯುತ್ತಿವೆ. ದಲಿತರು ಮತ್ತು ಹಿಂದುಳಿದ ವರ್ಗದವರು ಈ ಕುತಂತ್ರವನ್ನು ಅರ್ಥಮಾಡಿಕೊಳ್ಳಬೇಕು. ಈ ದಾಳಿ ಕೇವಲ ಮುಖ್ಯ ನ್ಯಾಯಮೂರ್ತಿಗಳ ಮೇಲೆ ನಡೆದದ್ದಲ್ಲ — ಅದು ದಲಿತರು ಹಾಗೂ ಹಿಂದುಳಿದ ವರ್ಗದವರ ಮೇಲಿನ ನೇರ ದಾಳಿ. ಆದ್ದರಿಂದ ಇಂತಹ ಅನ್ಯಾಯದ ವಿರುದ್ಧ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಹೇಳಿದರು.

ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, 2014ರಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರದಿಂದಲೂ ಇಂತಹ ಕೋಮುವಾದಿ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಈ ದೇಶದಲ್ಲಿ ಕೇವಲ ಶೇ.3ರಷ್ಟು ಮನುವಾದಿಗಳು 144 ಕೋಟಿಯ ಜನರನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ. ಭಾರತವು ದಲಿತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರದ್ದೇ ರಾಷ್ಟ್ರ, ಮನುವಾದಿಗಳದ್ದಲ್ಲ. ಇಂತಹ ಕುತಂತ್ರಗಳನ್ನು ಬಿಟ್ಟು ದೇಶದ ಬಹುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಕೆಲಸ ಸರ್ಕಾರ ಮಾಡಬೇಕು. ಇಲ್ಲವಾದರೆ ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶದಂತೆ ದೇಶ ಅಸ್ಥಿರವಾಗುವ ಪರಿಸ್ಥಿತಿ ಉಂಟಾಗಬಹುದು ಎಂದು ಹೇಳಿದರು.

ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಖ್ಯಾತ ಚಿಂತಕ, ಹೋರಾಟಗಾರ ಪಣಿರಾಜ್, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಅಲ್ಪಸಂಖ್ಯಾತರ ವೇದಿಕೆಯ ಜಿಲ್ಲಾಧ್ಯಕ್ಷ ಚಾರ್ಲ್ಸ್ ಆ್ಯಂಬ್ಲರ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಇದ್ರೀಸ್ ಹೂಡೆ, ವಿದ್ಯಾರ್ಥಿ ಮುಖಂಡ ನಿಹಾಲ್ ಹೂಡೆ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಕೀಲ ರಾಕೇಶ್ ಕಿಶೋರ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರತಿಭಟನೆಯಲ್ಲಿ ದಸಂಸ ಮೈಸೂರು ವಿಭಾಗದ ಸಂಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ, ಮುಖಂಡರಾದ ಶ್ಯಾಂಸುಂದರ ತೆಕ್ಕಟ್ಟೆ, ಶಶಿಧರ ಗೊಲ್ಲ, ಅನ್ವರ ಅಲಿ ಕಾಪು, ಕವಿರಾಜ್, ರಾಜು ಬೆಟ್ಟಿನಮನೆ ಮೊದಲಾದವರು ಉಪಸ್ಥಿತರಿದ್ದರು.










