ರಾಜ್ಯ ಸರ್ಕಾರವೇ ಪ್ರಕಟಿಸಿದ್ದ ಕನಿಷ್ಟ ಕೂಲಿ ಹಾಗೂ ತುಟ್ಟಿ ಭತ್ಯೆ ನೀತಿಗಳು ಜಾರಿಗೆ ಬರದೆ, ವರ್ಷಗಳಿಂದ ಎದುರಿಸುತ್ತಿರುವ ಅನ್ಯಾಯದ ವಿರುದ್ಧ ಉಡುಪಿ ಜಿಲ್ಲೆಯ ಬೀಡಿ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ರಾತ್ರಿ ಪೂರ್ತಿ ತಾಯಂದಿರು ಪ್ರತಿಭಟನಾ ಸ್ಥಳದಲ್ಲಿಯೇ ಮಲಗಿದ್ದಾರೆ. ನ.28ರವರೆಗೂ ಪ್ರತಿಭಟನಾ ಧರಣಿ ಮುಂದುವರೆಯುತ್ತದೆ. 2018 ಮತ್ತು 2024ರಲ್ಲಿ ಕರ್ನಾಟಕ ಸರ್ಕಾರ ಬೀಡಿ ಕಾರ್ಮಿಕರ ಕನಿಷ್ಠ ಕೂಲಿ ಪರಿಷ್ಕರಿಸಿ ಗೆಜೆಟ್ ಪ್ರಕಟಣೆ ಹೊರಡಿಸಿದರೂ, ಜಿಲ್ಲೆಯ ಬಹುತೇಕ ಬೀಡಿ ಮಾಲಿಕರು ಅದನ್ನು ಪಾಲಿಸದೆ ಕಾರ್ಮಿಕರನ್ನು ವಂಚಿಸುತ್ತಿದ್ದಾರೆ ಎನ್ನುವುದು ಕಾರ್ಮಿಕರ ಗಂಭೀರ ಆರೋಪ.
ವರ್ಷಗಳಿಂದ ಸರ್ಕಾರಕ್ಕೆ ಮನವಿಗಳು, ಎಚ್ಚರಿಕೆಗಳು, ಪ್ರತಿಭಟನೆಗಳು ನಡೆದರೂ ಸರಿಯಾದ ಸ್ಪಂದನೆ ನೀಡುತ್ತಿಲ್ಲ. ಬೀಡಿ ಕಂಪನಿಯವರು ಮತ್ತು ಸರ್ಕಾರ ಒಟ್ಟಾಗಿ ಕಾರ್ಮಿಕರಿಗೆ ದ್ರೋಹ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಕಾರ್ಮಿಕರಲ್ಲಿ ಮೂಡಿದೆ.

ಬೀಡಿ ಉದ್ಯಮವು ಉಡುಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಮಹಿಳೆಯರ ಜೀವನಾಧಾರವಾಗಿದೆ. ಮನೆಯಲ್ಲಿ ಕೂತು ಮಾಡುವ ಕೆಲಸವಾಗಿರುವ ಕಾರಣ, ಅನೇಕ ಕುಟುಂಬಗಳಿಗೆ ಇದು ಆದಾಯದ ಮೂಲವು ಹೌದು. ದಿನವಿಡೀ ಕಷ್ಟಪಟ್ಟು ಬೀಡಿ ಕಟ್ಟುವುದರ ಜೊತೆಗೆ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಹೀಗಿದ್ದರೂ ಸಾವಿರ ಬೀಡಿಗೆ ದೊರೆಯಬೇಕಾಗಿರುವ ಕೂಲಿ–ಭತ್ಯೆ ಅವರಿಗೆ ತಲುಪದಿರುವುದು ಅವರ ಜೀವನವನ್ನು ಮತ್ತಷ್ಟು ಹಿಂದಕ್ಕೆ ತಳ್ಳುತ್ತಿದೆ. ಬೀಡಿ ಕೆಲಸದಲ್ಲಿ ಮಹಿಳೆಯರು ಮತ್ತು ಹಿರಿಯರ ಸಂಖ್ಯೆಯೇ ಹೆಚ್ಚು. ಇವರಿಗೆ ಬೇರೆ ಉದ್ಯೋಗಗಳ ಸಾಧ್ಯತೆ ಕಡಿಮೆ. ಇಂತಹ ದುರ್ಬಲ ವಲಯದ ಕಣ್ಣೊರೆಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.

ರಾಜ್ಯ ಸರ್ಕಾರ 2018 ಹಾಗೂ 2024ರಲ್ಲಿ ಪರಿಷ್ಕೃತ ಕನಿಷ್ಠ ಕೂಲಿ ಪ್ರಕಟಿಸಿತ್ತು. ಅಧಿಕೃತ ಪ್ರಕಟಣೆಯ ಪ್ರಕಾರ, ಸಾವಿರ ಬೀಡಿಗೆ ತುಟ್ಟಿ ಭತ್ಯೆ ಸೇರಿ ₹301.98 ನೀಡಬೇಕಿತ್ತು. ಆದರೆ ಜಿಲ್ಲೆಯ ಬಹುತೇಕ ಮಾಲಿಕರು ಇದನ್ನು ಪಾಲಿಸದೇ, ಹಳೆಯದಕ್ಕಿಂತಲೂ ಕಡಿಮೆ ದರವನ್ನು ನೀಡುತ್ತಿದ್ದಾರೆ. ಗೆಜೆಟ್ ಪ್ರಕಟಣೆ ಇದ್ದರೂ ಅದರ ಜಾರಿಯಾಗಿಲ್ಲ, ಮಾಲಿಕರು ತಮ್ಮ ಮನಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರ ಕೂಡ ಅದೇ ಮಾಲಿಕರ ಪರವಾಗಿ ನಿಂತಿದೆ ಎಂದು ಕಾರ್ಮಿಕರು ಆರೋಪಿಸಿತ್ತಿದ್ದಾರೆ.
ನ.28 ರಂದು ಸಾವಿರಾರು ಬೀಡಿ ಕಾರ್ಮಿಕರು ಮಂಗಳೂರು ಸಹಾಯ ಕಾರ್ಮಿಕ ಕಮೀಷನರ್ ಕಚೇರಿ (ALC)ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಿದ್ದಾರೆ. ಕಾನೂನು ಬದ್ಧ ವೇತನ ಜಾರಿಗೆ ಮತ್ತು 7 ವರ್ಷಗಳ ಬಾಕಿ ವೇತನ ಕೂಡಲೇ ಪಾವತಿಗಾಗಿ ಆಗ್ರಹಿಸಿ ಉಡುಪಿ ಜಿಲ್ಲೆಯ ಬೀಡಿ ಕಾರ್ಮಿಕರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. 2024 ರಿಂದ ಪ್ರತಿ 1000 ಬೀಡಿಗೆ ಕರ್ನಾಟಕ ಸರಕಾರ ನಿಗದಿಗೊಳಿಸಿದಂತೆ ಕನಿಷ್ಠ ಕೂಲಿ ಡಿಎ ಸೇರಿ ರೂ. 301.92 ರಂತೆ ನೀಡಬೇಕಿದ್ದರೂ ನೀಡುತ್ತಿಲ್ಲ. ಈ ಕನಿಷ್ಠ ಕೂಲಿ ಸರಕಾರ ಪ್ರತಿ 1000 ಬೀಡಿಗೆ ರೂ 270 ಕನಿಷ್ಠ ಕೂಲಿ ಹಾಗೂ ಡಿಎ ಸೇರಿ ರೂ.287.4 ರಂತೆ ವೇತನ ನೀಡಬೇಕಿದ್ದರೂ 2025ರ ಮಾರ್ಚ್ ವರೆಗೆ ಪ್ರತಿ 1000 ಬೀಡಿಗೆ ಕೇವಲ ರೂ.263.80 ಮಾತ್ರ ಪಾವತಿ ಮಾಡಿದ್ದಾರೆ. ಪ್ರತಿ 1000 ಬೀಡಿ ವೇತನದಲ್ಲಿ ರೂ.23.24ರಂತೆ ಬಾಕಿ ಮಾಡಿದ್ದಾರೆ. ವರ್ಷದಲ್ಲಿ 1 ಲಕ್ಷ ಬೀಡಿ ಕಟ್ಟಿದರೂ ತಲಾ ಸಾವಿರಾರು ರೂಪಾಯಿ ಬೀಡಿ ಕಾರ್ಮಿಕರ ವೇತನ ಬಾಕಿ ಆಗಿದೆ. ಬೀಡಿ ಮಾಲಿಕರ ಪರವಾಗಿ ಇಂದಿನ ಸರಕಾರ ಕೆಲಸ ಮಾಡುತ್ತಿದೆಯೇ ಎನಿಸುತ್ತಿದೆ. ಕಾರ್ಮಿಕರ ವೇತನ ಹಿಮ್ಮುಖವಾಗಿ ನಿಗದಿಗೊಳಿಸಿ ಆದೇಶ ಮಾಡಿರುವುದು ಬೀಡಿ ಕಾರ್ಮಿಕರಿಗೆ ಮಾಡಿರುವ ಮೋಸ ಎಂದು ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಕಾರ್ಯದರ್ಶಿ ಕವಿರಾಜ್ ಎಸ್ ಕಾಂಚನ್ ಆರೋಪಿಸಿದ್ದಾರೆ.

ಈದಿನ.ಕಾಮ್ ಜೊತೆ ಮಾತನಾಡಿದ ಕುಂದಾಪುರ ಮೂಲದ ಯಶೋಧ, “ನಾವು 25 ವರ್ಷಗಳಿಂದ ಬೀಡಿ ಕಟ್ಟುತ್ತಿದ್ದೇವೆ. ಅದನ್ನೇ ಆಧಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮ್ಮ ಮಕ್ಕಳ ವಿದ್ಯಾಭ್ಯಾಸವೂ ಅದೇ ಆದಾಯದಿಂದ ನಡೆಯುತ್ತಿದೆ. ಆದರೆ ಇಂದಿನವರೆಗೆ ಮಕ್ಕಳಿಗೆ ಯಾವುದೇ ವಿದ್ಯಾರ್ಥಿವೇತನ ಸಿಕ್ಕಿಲ್ಲ. ನಮಗೆ ತುಂಬಾ ಕಷ್ಟವಾಗಿದೆ. ಬೀಡಿ ಕಟ್ಟಿದ ಹಣದಿಂದಲೇ ಮಕ್ಕಳನ್ನು ಸಾಕಬೇಕು. ಅವರಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ ಉತ್ತಮ ಪ್ರಜೆಯನ್ನಾಗಿ ಮಾಡಬೇಕು ಎಂಬುದು ನಮ್ಮ ಆಸೆ. ಆದರೆ ಈಗ ದೊರೆಯುತ್ತಿರುವ ಸಂಬಳದಿಂದ ಅದು ಸಾಧ್ಯವಾಗುತ್ತಿಲ್ಲ. ವಿದ್ಯಾಭ್ಯಾಸಕ್ಕೆ ಹಣ ಒದಗಿಸುವುದೇ ದೊಡ್ಡ ಸವಾಲಾಗಿದೆ. 2018ರಿಂದ 2024ರವರೆಗಿನ ತುಟ್ಟಿ ಭತ್ಯೆ ಸಿಕ್ಕಿಲ್ಲ, ಕನಿಷ್ಠ ಕೂಲಿಯೂ ಸಿಗುತ್ತಿಲ್ಲ. ಸರ್ಕಾರವು ನಮ್ಮ ವಿಷಯದಲ್ಲಿ ಯಾವುದೇ ಸ್ಪಂದನೆ ತೋರಿಸುತ್ತಿಲ್ಲ. ಎಲ್ಲರೂ ಮಾಲಿಕರ ಪರವಾಗಿದ್ದಾರೆ, ಕಾರ್ಮಿಕರ ಪರವಾಗಿ ಯಾರು ಇಲ್ಲ” ಎಂದು ದೂರಿದರು.
“ನಾವು ಹೋರಾಟ ನಡೆಸುತ್ತಾ ಬೆಂಗಳೂರಿನವರೆಗೂ ಹೋಗಿದ್ದೇವೆ. ಆದರೆ ಯಾವುದೇ ಫಲ ಸಿಗಲಿಲ್ಲ. ಸರ್ಕಾರ ನಮ್ಮ ಕಷ್ಟ ಆಲಿಸಿ ಸ್ಪಂದಿಸಬೇಕೇಂಬುದೇ ನಮ್ಮ ಬೇಡಿಕೆ. ಜಿಲ್ಲಾಧಿಕಾರಿಗಳು ಬಂದು ನಮ್ಮ ಮನವಿ ಸ್ವೀಕರಿಸಿ ಸರಿಯಾದ ಕ್ರಮ ಕೈಗೊಂಡು ಪ್ರತಿಕ್ರಿಯೆ ನೀಡುವವರೆಗೆ ಇಲ್ಲಿಂದ ಹೋಗುವುದಿಲ್ಲ. ಅಹೋರಾತ್ರಿ ಹೋರಾಟ ನಡೆಸಲು ನಾವು ತಯಾರಾಗಿಯೇ ಬಂದಿದ್ದೇವೆ” ಎಂದು ಹೇಳಿದರು.
ಪದ್ಮಾವತಿ ಮಾತನಾಡಿ, “ಬೀಡಿ ಕಾರ್ಮಿಕರಿಗೆ ಸಿಗಬೇಕಾದ ತುಟ್ಟಿ ಭತ್ಯೆಯನ್ನು ಇದುವರೆಗೆ ನೀಡಿಲ್ಲ. ಅದನ್ನು ತಕ್ಷಣ ನೀಡಬೇಕು ಎಂಬ ಆಗ್ರಹದಿಂದ ನಾವು ಈ ಪ್ರತಿಭಟನೆ ನಡೆಸುತ್ತಿದ್ದೇವೆ. ಇಷ್ಟು ವರ್ಷಗಳಿಂದ ಬೀಡಿ ಕಟ್ಟುವ ಕೆಲಸದ ಮೂಲಕವೇ ನಮ್ಮ ಮನೆ ಮಂದಿಯನ್ನು ಪೋಷಿಸಿದ್ದೇವೆ. ಈಗ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುವ ಸಂದರ್ಭದಲ್ಲಿ ತುಟ್ಟಿ ಭತ್ಯೆ ದೊರಕಿದರೆ ನಮ್ಮಂತಹ ಕಾರ್ಮಿಕರಿಗೆ ಸಹಾಯವಾಗುತ್ತದೆ. ಈಗಾಗಲೇ ಗ್ರಾಮ ಹಾಗೂ ತಾಲೂಕು ಮಟ್ಟದಲ್ಲಿ ಹಲವು ಬಾರಿ ಪ್ರತಿಭಟನೆ ಮತ್ತು ಮನವಿ ಸಲ್ಲಿಸಿದ್ದೇವೆ, ಆದರೆ ಯಾವುದೇ ಫಲ ಸಿಗಲಿಲ್ಲ. ಆದ್ದರಿಂದ ಇದೀಗ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಸತ್ಯಾಗ್ರಹಕ್ಕೆ ಕುಳಿತು ಪ್ರತಿಭಟಿಸುತ್ತಿದ್ದೇವೆ” ಎಂದು ಹೇಳಿದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಸುರೇಶ ಕಲ್ಲಾಗರ ಪ್ರತಿಕ್ರಿಯಿಸಿ, “ಬೀಡಿ ಮಾಲಿಕರು ಸರ್ಕಾರ ಮತ್ತು ಕಾನೂನಿಗಿಂತ ದೊಡ್ಡ ವ್ಯಕ್ತಿಗಳಾಗಿದ್ದರಿಂದಲೇ ಸರ್ಕಾರದ ಆದೇಶಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಕರಾವಳಿ ಜಿಲ್ಲೆಗಳ ಶಾಸಕರು ಹಾಗೂ ಜಿಲ್ಲಾಡಳಿತಗಳು ಬಡ ಬೀಡಿ ಕಾರ್ಮಿಕರ ಪರವಾಗಿ ನಿಲ್ಲದೇ ಮಾಲಿಕರ ಜೊತೆ ನಿಂತಿರುವುದರಿಂದಲೇ ಕಾರ್ಮಿಕರ ಬೆವರಿನ ಪಾಲಿನ ಕೂಲಿಯನ್ನು ನಾಚಿಕೆಯಿಲ್ಲದೇ ಬಾಕಿ ಇರಿಸಿಕೊಂಡಿದ್ದಾರೆ. ನ್ಯಾಯಕ್ಕಾಗಿ ಆರಂಭಿಸಿದ ಹಗಲು ರಾತ್ರಿ ಧರಣಿ ಯಶಸ್ವಿಯಾಗಿ ಮುಂದುವರಿಯಲಿ” ಎಂದು ಹೇಳಿದರು.

ಒಟ್ಟಿನಲ್ಲಿ ಬೀಡಿ ಕಾರ್ಮಿಕರ ಹಕ್ಕಿಗಾಗಿ ನಡೆದಿರುವ ಈ ಧರಣಿ ಮತ್ತೊಮ್ಮೆ ರಾಜ್ಯದಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಬೆಳಕಿಗೆ ತಂದಿದೆ. ಕನಿಷ್ಠ ಕೂಲಿ ನೀಡಬೇಕು ಎನ್ನುವಂತಹ ಸರ್ಕಾರದ ಆದೇಶಗಳು ಕಾಗದದ ಮೇಲೆಯೇ ಉಳಿದಿದೆಯೇ ಅಥವಾ ಸರ್ಕಾರ ನಿಜವಾಗಿಯೂ ಜಾರಿಗೆ ತರಲು ಬದ್ದವಾಗುವುದೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ. ಬೀಡಿ ಕಾರ್ಮಿಕರ ಅಹೋರಾತ್ರಿ ಪ್ರತಿಭಟನೆಗೆ ಜಯವಾಗಲಿ ಎಂಬುದೇ ಆಶಯ.



ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




