ಪ್ರತಿಭಟನಾ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಹಿಂದೂ ಜಾಗರಣಾ ವೇದಿಕೆಯ ನಾಯಕನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಅಜೆಕಾರು ಮರ್ಣೆ ನಡಿಬೆಟ್ಟು ಮೂಲದ ರತ್ನಾಕರ್ ಅಮೀನ್ (49) ಎಂಬವರು ಬಂಧಿತ ಆರೋಪಿಯಾಗಿದ್ದಾರೆ. ನವೆಂಬರ್ 15ರಂದು ಉಡುಪಿ ನಗರ ಜಟ್ಕಾ ನಿಲ್ದಾಣದ ಬಳಿ ಹಿಂದೂ ಜಾಗರಣಾ ವೇದಿಕೆ ಉಡುಪಿ ಘಟಕದ ವತಿಯಿಂದ ದೆಹಲಿ ಬಾಂಬ್ ಸ್ಫೋಟವನ್ನು ಖಂಡಿಸಿ ಪ್ರತಿಭಟನಾ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ರತ್ನಾಕರ್ ಅಮೀನ್ ಧರ್ಮಗಳ ನಡುವೆ ದ್ವೇಷ ಕೆರಳಿಸುವ ರೀತಿಯ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ, ಪೊಲೀಸ್ ನಿರೀಕ್ಷಕ ಮಂಜುನಾಥ್ ವಿ. ಬಡಿಗೇರ ಅವರ ನೇತೃತ್ವದ ವಿಶೇಷ ತಂಡವು ಖಚಿತ ಮಾಹಿತಿಯ ಆಧಾರದ ಮೇಲೆ ನವೆಂಬರ್ 18ರ ಬೆಳಗ್ಗೆ ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್‌ನಲ್ಲಿ ರತ್ನಾಕರ್ ಅಮೀನ್ ಅವರನ್ನು ವಶಕ್ಕೆ ಪಡೆದು ಬಂಧಿಸಿದೆ. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.





