ನಮ್ಮ ಬದುಕಿಗೆ ನೆಲೆ ಒದಗಿಸಿದ ಈ ನೆಲದೊಡಲಿನ ನೀರ ಖಜಾನೆಯನ್ನು ಬರಿದಾಗದಂತೆ ಕಾದುಕೊಳ್ಳದಿದ್ದರೆ ನೀರಿಗಾಗಿ ಕಣ್ಣೀರಿಡುವ ದುರಂತ ಕಾಲ ನಮ್ಮಿಂದ ಬಹಳ ದೂರವೇನೂ ಇಲ್ಲ ಎಂದು ಜಲಜೀವನ್ ಮಿಶನ್‌ನ ರಾಜ್ಯ ಸಂಪನ್ಮೂಲ ವ್ಯಕ್ತಿ ರತ್ನಶ್ರೀ ಜೋಸೆಫ್ ಜಿ ಎಂ ರೆಬೆಲ್ಲೋ ಹೇಳಿದರು.
ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಉಡುಪಿ ಜಿಲ್ಲಾ ಪಂಚಾಯತ್ ಜಲಜೀವನ್ ಮಿಶನ್ ವತಿಯಿಂದ ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರಾ.ಸೇ.ಯೋ. ಘಟಕ, ಯೂತ್ ರೆಡ್‌ಕ್ರಾಸ್ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ ʼಮಳೆನೀರು ಕೊಯ್ಲು ಮತ್ತು ಮಳೆನೀರು ಪುನರ್ ಬಳಕೆʼ ಕಾರ್ಯಕ್ರಮದ ಅಂಗವಾಗಿ ಪ್ರಾತ್ಯಕ್ಷಿಕೆ ಪ್ರದರ್ಶನ ಮತ್ತು ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್. ʼನಮ್ಮ ಹಿರೀಕರು ನೀರನ್ನೇ ನಿಧಿಯಾಗಿ ಕಾದುಕೊಳ್ಳುವ ಸಲುವಾಗಿಯೇ ಅದಕ್ಕೆ ಆಸ್ತಿಕತೆಯ ಆವರಣವನ್ನು ಬೆಸೆದು ಮಳೆನೀರು ಕೊಯ್ಲಿನ ನಿಸರ್ಗ ಸಹಜ ಮಾದರಿಗಳಾದ ಹುತ್ತಗಳನ್ನು ಹೇಗೆ ಜತನವಾಗಿ ಕಾದುಕೊಂಡಿದ್ದರು ಎಂಬ ಅರಿವು ನಮಗೆ ಅಗತ್ಯವಿದೆʼ ಎಂದರು.
ಕಾರ್ಯಕ್ರಮದಲ್ಲಿ ಜಲಜೀವನ್ ಮಿಶನ್‌ನ ಐ.ಎಸ್.ಎ. ಟೀಮ್ ಲೀಡರ್ ಶ್ರೀಮತಿ ಉಷಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯಲತಾ ಪಿ., ಐಕ್ಯುಎಸಿ ಸಂಚಾಲಕ ಡಾ. ಲಿತಿನ್ ಬಿ.ಎಂ., ರಾ.ಸೇ.ಯೋ. ಮತ್ತು ಯೂತ್ ರೆಡ್‌ಕ್ರಾಸ್ ಕಾರ್ಯಕ್ರಮಾಧಿಕಾರಿ ನಂದೀಶ್‌ಕುಮಾರ್ ಕೆ.ಸಿ. ಮತ್ತು ವಿದ್ಯಾರ್ಥಿ ನಾಯಕ ಈರಬಸು ಉಪಸ್ಥಿತರಿದ್ದರು. ಸುಹಾ ಸ್ವಾಗತಿಸಿ, ಯಮನಪ್ಪ ಅತಿಥಿಗಳನ್ನು ಪರಿಚಯಿಸಿ, ಖುಷಿ ವಂದಿಸಿದ ಈ ಕಾರ್ಯಕ್ರಮವನ್ನು ವೈಷ್ಣವಿ ನಿರೂಪಿಸಿದರು.





