ಅಪಘಾತ ಪ್ರಕರಣಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಪ್ರತಿ ಮೂರು ನಿಮಿಷಕ್ಕೆ ಒಬ್ಬರು ರಸ್ತೆ ಅಪಘಾತದಿಂದ ಮರಣ ಹೊಂದುತ್ತಿದ್ದಾರೆ. ವರ್ಷಕ್ಕೆ ಸುಮಾರು 1.69ಲಕ್ಷ ಮಂದಿ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್ ಟಿ ಸಿದ್ಧಲಿಂಗಪ್ಪ ಹೇಳಿದ್ದಾರೆ.
ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲಾ 317ಸಿ, ಜಿಲ್ಲಾ ಲಿಯೋ 317ಸಿ ಹಾಗೂ ಉಡುಪಿ ಎಂಜಿಎಂ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತೆ ಮತ್ತು ಸಂಚಾರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಭಾರತದ ಆರ್ಥಿಕ ವ್ಯವಸ್ಥೆಗೆ ಅಪಘಾತ ಪ್ರಕರಣಗಳು ಬಹಳ ದೊಡ್ಡ ಮಾರಕವಾಗಿ ಪರಿಣಮಿಸಿವೆ. ಹಾಗಾಗಿ ಅಪಘಾತ ಪ್ರಕರಣಗಳು ಕೊರೊನಾಗಿಂತಲೂ ಮಹಾಮಾರಿಯಾಗಿದೆ” ಎಂದರು.
“ಅಪಘಾತದಲ್ಲಿ ಯಜಮಾನ ಮೃತಪಟ್ಟರೆ ಆ ಕುಟುಂಬದ ಶೇ.75ರಷ್ಟು ಆರ್ಥಿಕ ವ್ಯವಸ್ತೆ ಕುಸಿದು ಹೋಗುತ್ತದೆ. ಆದುದರಿಂದ ಪ್ರತಿಯೊಬ್ಬರೂ ರಸ್ತೆ ನಿಯಮಗಳನ್ನು ಅರಿತುಕೊಳ್ಳಬೇಕು. ತಮ್ಮ ಬಳಿ ಎಲ್ಲ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಮತ್ತು ತಾಳ್ಮೆಯಿಂದ ವಾಹನ ಚಲಾಯಿಸಬೇಕು. ಆಗ ಮಾತ್ರ ರಸ್ತೆ ಅಪಘಾತ ಪ್ರಕರಣಗಳನ್ನು ತಡೆಯಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
63 ಲಕ್ಷ ಕಿಮೀ ಉದ್ದದ ರಸ್ತೆ ಹೊಂದಿರುವ ಭಾರತ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಅಪಘಾತ ಪ್ರಕರಣಗಳಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ. ಇದಕ್ಕೆ ಜನಸಂಖ್ಯೆ ಹಾಗೂ ವಾಹನ ಸಂಖ್ಯೆಗಳು ಜಾಸ್ತಿಯಾಗುತ್ತಿರುವುದು ಕಾರಣವಾಗಿದೆ. ಭಾರತದಲ್ಲಿ ತಮಿಳುನಾಡು ಅತಿ ಹೆಚ್ಚು ಅಪಘಾತಗಳು ಸಂಭವಿಸುವ ರಾಜ್ಯವಾಗಿದೆ. ಇದರಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ” ಎಂದು ತಿಳಿಸಿದರು.
“ಉಡುಪಿ ಜಿಲ್ಲೆಯಲ್ಲಿ ಪ್ರತಿದಿನ ನಾಲ್ಕು ಅಪಘಾತ ಪ್ರಕರಣಗಳು ನಡೆಯುತ್ತಿದ್ದು, ವಾರಕ್ಕೆ ಎರಡ್ಮೂರು ಮಂದಿ ಅಪಘಾತದಿಂದ ಸಾವನ್ನಪ್ಪುವ ಪ್ರಕರಣಗಳು ವರದಿಯಾಗುತ್ತಿವೆ. ಜಿಲ್ಲೆಯಲ್ಲಿ ವರ್ಷಕ್ಕೆ ದಾಖಲಾಗುವ ಒಟ್ಟು 2,500 ಪ್ರಕರಣಗಳಲ್ಲಿ 1000 ಪ್ರಕರಣಗಳು ಅಪಘಾತ ಪ್ರಕರಣಗಳೇ ಆಗಿರುತ್ತವೆ. ಆದುದರಿಂದ ಇದರ ಗಂಭೀರತೆಯನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು” ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ಎಂ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಲಯನ್ಸ್ ಜಿಲ್ಲಾ ಗವರ್ನರ್ ಮುಹಮ್ಮದ್ ಹನೀಫ್, ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ, ಉಪ ಗವರ್ನರ್‌ಗಳಾದ ಸ್ವಪ್ನಾ ಸುರೇಶ್, ಉಡುಪಿ ಡಿವೈಎಸ್‌ಪಿ ಪ್ರಭು ಡಿ ಟಿ, ಲಯನ್ಸ್ ಎಲ್‌ಸಿಐಎಫ್ ಸಂಯೋಜಕ ಹರಿಪ್ರಸಾದ್ ರೈ ಮುಖ್ಯ ಅತಿಥಿಗಳಾಗಿದ್ದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಕರ್ನಾಟಕ ಕಾಲೇಜಿನ ಪ್ರವೇಶಾತಿಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ: ಮುತ್ತಪ್ಪ ಎಸ್ ಆಕ್ರೋಶ
ಜಿಲ್ಲಾ ಲಿಯೋ ಉಪಾಧ್ಯಕ್ಷೆ ಪ್ರಜ್ಞಾ ಜೆ ಪಿ, ಪಿಆರ್‌ಒ ಧೃತಿ ಹೆಗ್ಡೆ, ಮಾಜಿ ಅಧ್ಯಕ್ಷ ಆದಿತ್ಯ ಶೇಟ್ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಲಿಯೋ ಜಿಲ್ಲಾಧ್ಯಕ್ಷೆ ಶರೋನ್ ಮಾಬೆನ್, ಲಿಯೋ ಜಿಲ್ಲಾ ಮೆಂಟರ್ ಜಯಕರ ಶೆಟ್ಟಿ ಇಂದ್ರಾಳಿ, ಜಿಲ್ಲಾ ಸಂಯೋಜಕ ಮುಹಮ್ಮದ್ ವೌಲಾ, ಜಿಲ್ಲಾ ಲಿಯೋ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ ಇದ್ದರು.





