ಉಡುಪಿ | ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಸಂಚಾರ ಮುಕ್ತವಾದರೂ, ಪಾದಚಾರಿಗಳ ಗೋಳು ಕೇಳೋರಿಲ್ಲ !

Date:

ಉಡುಪಿಯ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ನಗರ ಮತ್ತು ಮಣಿಪಾಲದ ಮಧ್ಯೆ ಸಂಚಾರದ ಪ್ರಮುಖ ಕೊಂಡಿಯಾಗಿದ್ದ ಈ ಯೋಜನೆ ಎಂಟು ವರ್ಷಗಳ ದೀರ್ಘ ಕಾಯುವಿಕೆ, ಹೋರಾಟದ ಫಲವಾಗಿ ಕೊನೆಗೂ ಸಂಚಾರಕ್ಕೆ ಮುಕ್ತವಾಗಿದೆ. ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಕಳೆದ ಸೆಪ್ಟೆಂಬರ್‌ 21ರಂದು ಸೇತುವೆ ಲೋಕಾರ್ಪಣೆ ಮಾಡಿದ ಕ್ಷಣ, ಉಡುಪಿಯ ನಾಗರಿಕರ ಬಹುಕಾಲದ ಕನಸಿನ ಕ್ಷಣವಾಗಿತ್ತು. ಆದರೆ ಈಗ ಪ್ರಶ್ನೆ ಏನೆಂದರೆ ಸೇತುವೆ ಸಂಚಾರ ಮುಕ್ತವಾದರೂ, ಅದರ ಪೂರಕ ಮೂಲಸೌಕರ್ಯಗಳು ಮಾತ್ರ ಪೂರ್ಣಗೊಂಡಿಲ್ಲ.

1000164952 1

ಮಲ್ಪೆ–ಚಿತ್ರದುರ್ಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಇಂದ್ರಾಳಿ ರೈಲು ಕ್ರಾಸಿಂಗ್ ವರ್ಷಗಳ ಕಾಲ ವಾಹನ ಸವಾರರ ತಲೆನೋವಾಗಿತ್ತು. ರೈಲು ಓಡಾಟ ನಿಲ್ಲುವವರೆಗೆ ಕಾಯಬೇಕಾದ ಸಮಯ, ಟ್ರಾಫಿಕ್ ಜಾಮ್ ಹಾಗೂ ಅಪಘಾತದ ಭೀತಿ ಇವೆಲ್ಲವೂ ನಾಗರಿಕರ ದೈನಂದಿನ ಅನುಭವವಾಗಿತ್ತು. ತಾಂತ್ರಿಕ ಅಡೆತಡೆಗಳು, ರೈಲ್ವೆ ಇಲಾಖೆಯ ಅನುಮತಿ ಮತ್ತು ಹಣಕಾಸು ವಿಳಂಬಗಳಿಂದ ಕಾಮಗಾರಿ ವರ್ಷಗಳ ಕಾಲ ನೆನೆಗುದಿಗೆ ಬಿದ್ದಿತ್ತು. ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು, ಸ್ಥಳೀಯ ಸಂಘಟನೆಗಳು ಹೋರಾಟ ನಡೆಸಿದ ಬಳಿಕ ಕೊನೆಗೂ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ತೆರೆಯಲ್ಪಟ್ಟಿದೆ. ಸೇತುವೆಯ ನಿರ್ಮಾಣ ತಾಂತ್ರಿಕ ದೃಷ್ಟಿಯಿಂದ ಶ್ಲಾಘನೀಯವಾದರೂ, ಪಾದಚಾರಿ ಸುರಕ್ಷತೆ ವಿಷಯದಲ್ಲಿ ಉಡುಪಿಯ ಜನತೆ ಗಂಭೀರ ಚಿಂತನೆ ವ್ಯಕ್ತಪಡಿಸಿದ್ದಾರೆ. ಸೇತುವೆಯ ಮೇಲ್ಭಾಗದಲ್ಲಿ ಪಾದಚಾರಿ ಮಾರ್ಗವಿದ್ದರೂ, ಸೇತುವೆಯ ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗವೇ ಇಲ್ಲ.

WhatsApp Image 2025 10 19 at 12.03.46 AM

ಹೊಸ ಸೇತುವೆ ಆರಂಭವಾಗುವ ಸ್ಥಳದಿಂದ ಸುಮಾರು 25 ಮೀಟರ್‌ದ ನೇರ ರಸ್ತೆ ಭಾಗದಲ್ಲಿ ಮಣ್ಣಿನ ರಾಶಿ ಬಿದ್ದಿದ್ದು, ತಡೆಗೋಡೆ ನಿರ್ಮಾಣ ಮಾಡಿಲ್ಲ. ಮಳೆ ಬಂದಾಗ ಅದು ಕೆಸರುಮಯವಾಗುತ್ತದೆ. ಶಾಲಾ ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ರಸ್ತೆ ಮಧ್ಯೆ ನಡೆದು ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಪೆಟ್ರೋಲ್ ಬಂಕ್‌ ಪ್ರದೇಶದವರೆಗೂ ಪಾದಚಾರಿ ಮಾರ್ಗದ ಕಾಮಗಾರಿ ಅಪೂರ್ಣವಾಗಿದೆ. ಸೇತುವೆ ಸಂಚಾರಕ್ಕೆ ಮುಕ್ತವಾದರೂ, ಪಾದಚಾರಿಗಳ ಸುರಕ್ಷತೆ ಬಗ್ಗೆ ಯಾರು ಯೋಚಿಸಿದ್ದಾರೆ? ಎಂದು ಸ್ಥಳೀಯರು ಪ್ರಶ್ನಿಸಿದಾರೆ. ಸೇತುವೆಯ ಸುತ್ತಮುತ್ತ ಹಲವು ವಿದ್ಯಾಸಂಸ್ಥೆಗಳಿವೆ. ಪ್ರತಿ ದಿನ ನೂರಾರು ವಿದ್ಯಾರ್ಥಿಗಳು ಇಂದ್ರಾಳಿ ಪ್ರದೇಶದ ಈ ರಸ್ತೆ ಬಳಸಿ ಸಂಚಾರ ಮಾಡುತ್ತಾರೆ. ಮಳೆ ಬಂದಾಗ ಸಂಪರ್ಕ ರಸ್ತೆ ಕೆಸರುಮಯವಾಗಿ ನಡೆದುಕೊಂಡು ಹೋಗುವುದೇ ಕಷ್ಟವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2025 10 19 at 3.38.44 AM

ಈ ದಿನ.ಕಾಮ್‌ ಜೊತೆ ಮಾತನಾಡಿದ ಉಡುಪಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಸಂಚಾಲಕ ಅಮೃತ್ ಶೆಣೈ, ಸಾರ್ವಜನಿಕರ ಆಕ್ರೋಶ, ಒತ್ತಡ ಹೆಚ್ಚಾದಾಗ ಜನಪ್ರತಿನಿಧಿಗಳು ತಮ್ಮ ಕೆಲಸವನ್ನು ತೋರಿಸಬೇಕಾಗುತ್ತದೆ. ಇಂದ್ರಾಳಿ ಸೇತುವೆ ಅದಕ್ಕೆ ದೊಡ್ಡ ಉದಾಹರಣೆ. ನಮ್ಮ ಎರಡು ಹೋರಾಟಗಳಲ್ಲಿ, ಏಪ್ರಿಲ್ ಫೂಲ್ ದಿನ ತಲೆ ಬೋಳಿಸಿ ಪ್ರತಿಭಟನೆ ನಡೆಸಿದದ್ದು ಅಧಿಕಾರಿಗಳಿಗೆ ಒತ್ತಡ ಉಂಟುಮಾಡಿತು, ಅದರಿಂದಲೇ ಕಾಮಗಾರಿ ವೇಗವಾಗಿ ಮುಗಿಯಿತು. ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಕೆಲವೊಮ್ಮೆ ತಮ್ಮ ಕರ್ತವ್ಯಗಳನ್ನು ಮರೆತುಬಿಡುತ್ತವೆ. ಅಂಥ ಸಂದರ್ಭಗಳಲ್ಲಿ ಜನರ ಒತ್ತಡ, ಸಂಘಟಿತ ಹೋರಾಟಗಳಿಂದ ಮಾತ್ರ ಕೆಲಸಗಳು ಚುರುಕುಗೊಳ್ಳುತ್ತವೆ. ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ, ಆದರೆ ಸುತ್ತಮುತ್ತಲಿನ ಶಾಲೆ, ದೇವಸ್ಥಾನ, ಮಸೀದಿ, ರೈಲ್ವೆ ನಿಲ್ದಾಣಕ್ಕೆ ಹೋಗುವ ಸಂಪರ್ಕ ರಸ್ತೆಗಳು ಪೂರ್ಣಗೊಂಡಿಲ್ಲ ಅವುಗಳನ್ನು ಕೂಡ ತಕ್ಷಣ ಮಾಡಬೇಕು. ಸಂತೆಕಟ್ಟೆ, ಪರ್ಕಳ, ಅಂಬಲಪಾಡಿ ರಸ್ತೆ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಇದರ ವಿರುದ್ಧ ಮುಂದಿನ ಹೋರಾಟಕ್ಕೆ ನಾವು ಸಿದ್ಧತೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಈ ದಿನ. ಕಾಮ್‌ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ, ಸ್ಥಳಿಯರಾದ ಟಿಎಸ್ ಅನ್ಸರ್, ಇಂದ್ರಾಳಿಯ ಸೇತುವೆ ಪಕ್ಕದ ರಸ್ತೆಯಲ್ಲಿ 50–60 ಮನೆಗಳು, ನೂರಕ್ಕೂ ಹೆಚ್ಚು ಫ್ಲಾಟ್‌ಗಳು ಇವೆ. ರೈಲ್ವೆ ನಿಲ್ದಾಣಕ್ಕೆ ಹೋಗಲು ನೇರ ದಾರಿ ಇಲ್ಲ. ಮಳೆಗಾಲದಲ್ಲಿ ರಸ್ತೆ ಕೆಸರುಮಯವಾಗುತ್ತದೆ. ಶಾಲಾ ಮಕ್ಕಳು, ವೃದ್ದರು, ಮಹಿಳೆಯರು ಹಾಗೂ ಮಸೀದಿಗೆ ಹೋಗುವವರು ದಿನವೂ ಅಪಾಯಕ್ಕೆ ಒಳಗಾಗುತ್ತಿದ್ದಾರೆ. ಕಾಲುದಾರಿ ಮೇಲ್ಸೇತುವೆ ಮಾಡಿದರೆ ಸ್ಥಳಿಯರಿಗೆ ಅನುಕೂಲವಾಗುತ್ತದೆ. ಸಂಬಂಧಪಟ್ಟವರು ಈ ಬಗ್ಗೆ ಕೂಡಲೇ ಗಮನಹರಿಸಬೇಕೆಂದು ಒತ್ತಾಯಿಸಿದರು.

ರಡಡಡ 1

ಮಾಧ್ಯಮದ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಮೆಟ್ಟಲುಗಳು, ಜೀಬ್ರಾ ಕ್ರಾಸಿಂಗ್‌ಗಳು, ಗ್ರಿಲ್ ತಡೆಬೇಲಿ ನಿರ್ಮಿಸಬೇಕು. ಎರಡೂ ಬದಿಗಳಲ್ಲಿ ದೀಪ ವ್ಯವಸ್ಥೆ ಕಲ್ಪಿಸಬೇಕು. ವೇಗ ಮಿತಿ ಬೋರ್ಡ್ ಅಳವಡಿಸಬೇಕು. ಇಲ್ಲದಿದ್ದರೆ ಅಪಘಾತದ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

WhatsApp Image 2025 10 19 at 12.03.46 AM 1

ಇತ್ತೀಚೆಗೆ ಉಡುಪಿ ಜಿಲ್ಲಾ ನಾಗರೀಕ ಸಮಿತಿ ಟ್ರಸ್ಟ್‌ ಆಯೋಜಿಸಿದ್ದ “ಇಂದ್ರಾಳಿ ಮೇಲ್ಸೇತುವೆ ಹರ್ಷೋತ್ಸವ” ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಮಾತನಾಡಿ, ಸೇತುವೆ ನಿರ್ಮಾಣ ಶ್ಲಾಘನೀಯ. ಆದರೆ ಸಮೀಪದ ಶಾಲಾ–ಕಾಲೇಜು ವಿದ್ಯಾರ್ಥಿಗಳು ವಾಹನ ದಟ್ಟಣೆ ಇರುವ ಹೆದ್ದಾರಿ ದಾಟಬೇಕಾದ ಅಪಾಯದಿಂದ ತಪ್ಪಿಸಿಕೊಳ್ಳಲು ಸೂಕ್ತ ಪಾದಚಾರಿ ಮಾರ್ಗ, ಭದ್ರತಾ ಬೇಲಿ ಹಾಗೂ ಲೈಟ್ ವ್ಯವಸ್ಥೆ ಅಗತ್ಯ,” ಎಂದು ಹೇಳಿದ್ದರು.

ಸೇತುವೆಯ ನಿರ್ಮಾಣದಿಂದ ಉಡುಪಿ–ಮಣಿಪಾಲ ಮಾರ್ಗದ ಟ್ರಾಫಿಕ್ ಸಮಸ್ಯೆ ಬಹುಪಾಲು ಪರಿಹಾರಗೊಂಡಿದ್ದರೂ, ಪಾದಚಾರಿ ಸುರಕ್ಷತೆ, ಅಪ್ರೋಚ್ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕೊರತೆಗಳಿಂದ ನಾಗರಿಕರು ಇನ್ನೂ ತೊಂದರೆ ಅನುಭವಿಸುತ್ತಿದ್ದಾರೆ. ಉಡುಪಿಯ ಇಂದ್ರಾಳಿ ರೈಲ್ವೇ ಮೇಲ್ಸೇತುವೆ — ದೀರ್ಘಕಾಲದ ಹೋರಾಟದ ನಂತರ ಜನರಿಗೆ ಸಂಚಾರದ ಸೌಕರ್ಯ ನೀಡಿದರೂ, ಪಾದಚಾರಿಗಳ ಜೀವ ಭದ್ರತೆ ಇನ್ನೂ ಖಚಿತವಾಗಿಲ್ಲ. ಸೇತುವೆ ನಿರ್ಮಾಣ ಅಭಿವೃದ್ಧಿಯ ಒಂದು ಹಂತವಾಗಿದ್ದರೆ, ಅದರ ಸುರಕ್ಷತೆ ಮತ್ತು ಸೌಲಭ್ಯಗಳು ಅದರ ಸಾರ್ಥಕತೆ ನಿರ್ಧರಿಸಲಿವೆ. ಈ ಬಗ್ಗೆ ಜಿಲ್ಲಾಡಳಿತ ಶೀಘ್ರವಾಗಿ ಕ್ರಮವಹಿಸಬೇಕಾಗಿದೆ.

WhatsApp Image 2025 10 19 at 12.03.47 AM
WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...