ಉಡುಪಿ ನಗರದ ಕಲ್ಸಂಕ ಸಿಗ್ನಲ್ ಬಳಿ ಭಾನುವಾರ ಸಂಜೆ ಆತಂಕಕಾರಿ ಘಟನೆ ನಡೆದಿದ್ದು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವಕನೊಬ್ಬ ತನ್ನ ಕಾಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಘಟನೆ ವರದಿಯಾಗಿದೆ.
ಗಾಯಗೊಂಡ ಯುವಕನನ್ನು ಶರಣಪ್ಪ ಬಸಪ್ಪನವರ್ (34), ತಂದೆ ಫಕೀರಪ್ಪ, ವಾಸ: ಮನೆ ನಂ.20, ಬೆಂತೂರ್, ಸರಕಾರಿ ಪ್ರಾಥಮಿಕ ಶಾಲೆ ಬಡಪ್ಪನವರ್, ಗದಗ ತಾಲ್ಲೂಕು ಎಂದು ಗುರುತಿಸಲಾಗಿದೆ.
ಸಂಜೆ 6.15ರ ಸುಮಾರಿಗೆ ಕಲ್ಸಂಕ ಜಂಕ್ಷನ್ ಬಳಿ ಶರಣಪ್ಪ ತನ್ನ ಮೇಲೆ ಯಾರೋ ಹಲ್ಲೆ ನಡೆಸಿದ್ದಾರೆಂದು ಹೇಳುತ್ತಾ ಕಾಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ಪರಿಣಾಮವಾಗಿ ಅವನ ಕಾಲಿಗೆ ಗಂಭೀರ ಗಾಯಗಳಾಗಿವೆ.
ಘಟನೆಯ ಸಮಯದಲ್ಲಿ ಕಲ್ಸಂಕ ಜಂಕ್ಷನ್‌ನಲ್ಲಿ ಸಂಚಾರ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಶ್ರೀ ಲಿಂಗರಾಜು ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಪೆಟ್ರೋಲ್ ಬಾಟಲಿಯನ್ನು ಯುವಕನಿಂದ ದೂರ ಮಾಡಿ ಹೆಚ್ಚಿನ ಅನಾಹುತವಾಗುವುದನ್ನು ತಡೆದರು. ಉಡುಪಿ ನಗರ ಠಾಣಾ ಪೊಲೀಸರು ಹಾಗೂ ನಿತ್ಯಾನಂದ ಒಳಕಾಡುರವರು ಕೂಡ ಸಹಾಯಕರಾಗಿ ಕಾರ್ಯನಿರ್ವಹಿಸಿ ಯುವಕನನ್ನು ರಕ್ಷಿಸಿದರು.
ಸ್ಥಳೀಯರ ಸಹಕಾರದಿಂದ ಗಾಯಗೊಂಡ ಯುವಕನನ್ನು ತಕ್ಷಣ ಅಜ್ಜರಕಾಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಸ್ತುತ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಯುವಕ ಮಾನಸಿಕವಾಗಿ ಅಸ್ವಸ್ಥನಾಗಿದ್ದು, “ತನ್ನ ಊರಿಗೆ ಹೋಗುತ್ತೇನೆ” ಎಂದು ಹೇಳುತ್ತಾ ಗಲಾಟೆ ಮಾಡುತ್ತಿದ್ದನೆಂದು ತಿಳಿದುಬಂದಿದೆ. ನಾಲ್ಕು ದಿನಗಳ ಹಿಂದೆ ಪತ್ನಿ ಭಾಗ್ಯ ಅವರೊಂದಿಗೆ ಗದಗ ಜಿಲ್ಲೆಯಿಂದ ಉಡುಪಿಗೆ ಬಂದಿದ್ದ ಆತ, ಮಹಾಂತೇಶ ಎಂಬವರೊಂದಿಗೆ ಕೂಲಿ ಕೆಲಸ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ತನ್ನ ಊರಿನಲ್ಲಿ ಕುಟುಂಬ ಸದಸ್ಯರೊಂದಿಗೆ ಗಲಾಟೆ ಮಾಡಿಕೊಂಡ ಹಿನ್ನೆಲೆ ಮನಸ್ಥಿತಿ ಕಳೆದುಕೊಂಡು ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





