ದ್ವೇಷ, ಕತ್ತಲು ತುಂಬಿದ ಸಮಾಜದಲ್ಲಿ ಪ್ರೀತಿ, ಸಹಬಾಳ್ವೆ ಎಂಬ ಹಣತೆಗಳನ್ನು ಹಚ್ಚುವ ಮೂಲಕ ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕನ್ನು ಕಾಣುವ ಕೆಲಸ ಇಂದಿನ ಪ್ರಮುಖ ಆದ್ಯತೆಯಾಗಬೇಕು ಎಂದು ಯುಬಿಎಂ ಚರ್ಚ್ ಮಲ್ಪೆ ಇದರ ವಂ| ಕುಮಾರ್ ಸಾಲಿನ್ಸ್ ಹೇಳಿದರು.
ಅವರು ಗುರುವಾರ ಮಲ್ಪೆ ಸಿಎಸ್ ಐ ಎಬನೇಜರ್ ಚರ್ಚ್ ಮಲ್ಪೆಯಲ್ಲಿ ಜರುಗಿದ ಕಲ್ಯಾಣಪುರ ವಲಯ ಹಂತದ ಕ್ರೈಸ್ತ ಐಕ್ಯತಾ ಪ್ರಾರ್ಥನಾ ಸಭೆಯಲ್ಲಿ ಪ್ರಬೋಧನೆ ನೀಡಿ ಮಾತನಾಡಿದರು.
ಬೆಳಕು ನಮ್ಮ ಸುತ್ತಲಿನ ಕತ್ತಲನ್ನು ಕರಗಿಸುತ್ತದೆ. ಯೇಸು ಸ್ವಾಮಿಯು ಮರಣವನ್ನು ಜಯಿಸಿ ಪುನರುತ್ಥಾನದ ಬೆಳಕನ್ನು ನಮಗೆ ನೀಡಿದ್ದಾರೆ. ಅಂತೆಯೇ ನಾವು ಕೂಡ ಕತ್ತಲನ್ನು ತುಂಬಿದ ದುರ್ಬಲರ ಬದುಕಿನಲ್ಲಿ ಹಣತೆ ಹಚ್ಚುವ ಕೆಲಸ ಮಾಡಿದಾಗ ನಮ್ಮ ಜೀವನ ಸಾರ್ಥಕತೆಯನ್ನು ಕಾಣುತ್ತದೆ ಎಂದರು.
ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನ ಸಹಾಯಕ ಧರ್ಮಗುರು ವಂ|ಪ್ರದೀಪ್ ಕಾರ್ಡೊಜಾ ತಮ್ಮ ಪ್ರಬೋಧನೆಯಲ್ಲಿ ಪರರನ್ನು ಪ್ರೀತಿಸದ ಮಾನವ ಹೃದಯ ಸ್ಮಶಾನಕ್ಕೆ ಸಮ ಎಂಬಂತೆ ನಾವು ವಸ್ತುಗಳನ್ನು ಪ್ರೀತಿಸುವ ಬದಲು ಮಾನವರನ್ನು ಪ್ರೀತಸುವುದರ ಮೂಲಕ ಪ್ರತಿಯೊಬ್ಬರೂ ಶಾಂತಿಯ ದೂತರಾಗಿ ಜಗತ್ತಿಗೆ ದಾರಿದೀಪವಾಗುವ ಕೆಲಸವನ್ನು ಮಾಡಬೇಕಾಗಿದೆ. ಪರರ ಕಷ್ಟ ಸಂಕಷ್ಟಗಳಿಗೆ ನಾವು ಸ್ಪಂದಿಸುವುದರ ಮೂಲಕ ಐಕ್ಯತಾ ಮನೋಭಾವವನ್ನು ವೃದ್ಧಿಗೊಳಿಸಬೇಕು. ಪರರ ನೋವಿಗೆ ದನಿಯಾದಾಗ ಅವರಲ್ಲಿ ಪರಮಾತ್ಮನನ್ನು ಕಾಣಲು ಸಾಧ್ಯವಿದೆ. ಸಮಾಜದಲ್ಲಿ ನಿರ್ಗತಕರನ್ನು ಅನಾಥರನ್ನು ಪ್ರೀತಿಸುವ ಮೂಲಕ ಯೇಸು ಸ್ವಾಮಿ ತೋರಿಸಿದ ದಾರಿಯಲ್ಲಿ ಸಾಗಬೇಕು ಎಂದರು.
ಪ್ರಾರ್ಥನಾ ಕೂಟದ ನೇತೃತ್ವವನ್ನು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಪ್ರಧಾನ ಧರ್ಮಗುರುಗಳಾದ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ವಹಿಸಿದ್ದರು. ಪ್ರಾರ್ಥನಾ ಕೂಟದಲ್ಲಿ ವಂ|ಡಾ|ರೋಕ್ ಡಿಸೋಜಾ, ವಂ|ಜೋನ್ ಫೆರ್ನಾಂಡಿಸ್, ವಂ|ವಿಲ್ಸನ್ ಡಿಸೋಜಾ, ವಂ|ಅಶ್ವಿನ್ ಆರಾನ್ಹಾ, ವಂ|ಜೋಕಿಮ್ ಡಿಸೋಜಾ, ಸಿಎಸ್ ಐ ಸಭೆಯ ಉಡುಪಿ ವಲಯ ಮುಖ್ಯಸ್ಥರಾದ ವಂ|ಕಿಶೋರ್, ವಂ|ಎಡ್ವಿನ್ ಸೋನ್ಸ್, ತೊಟ್ಟಂ ಚರ್ಚಿನ ಪಾಲನಾ ಸಮಿತಿಯ ಲೆಸ್ಲಿ ಆರೋಜಾ, ಸಿಸ್ಟರ್ ಸುಶ್ಮಾ, ರೋಮನ್ ಕ್ಯಾಥೊಲಿಕ್, ಸಿಎಸ್ ಐ, ಸಹಿತ ವಿವಿಧ ಕ್ರೈಸ್ತ ಸಭೆಗಳ ಪ್ರತಿನಿಧಿಗಳು ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡಿದ್ದರು.
ಸಿಎಸ್ ಐ ಎಬನೇಜರ್ ಚರ್ಚ್ ಮಲ್ಪೆ ಪಾಸ್ಟರ್ ವಂ|ವಿನಯ್ ಸಂದೇಶ್ ಸ್ವಾಗತಿಸಿ, ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.





