ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಮರತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಖಾಲಿ ಜಾಗದಲ್ಲಿ ವರಾಹಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ 22 ಆರೋಪಿಗಳನ್ನು ಬಂಧಿಸಲಾಗಿದೆ.
ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ.ಯು. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಕೋಟ ಠಾಣೆಯ ಪಿ.ಎಸ್.ಐ. ಪ್ರವೀಣ್ ಕುಮಾರ್ ಆರ್. ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿದರು.
ದಾಳಿಯ ವೇಳೆ ಸುಮಾರು 315 ಯುನಿಟ್ ಮರಳು (ಅಂದಾಜು ಮೌಲ್ಯ ರೂ. 8,50,000/-), ಮರಳು ತೆಗೆಯಲು ಬಳಸಿದ 3 ಪೈಬರ್ ಬೋಟ್‌ಗಳು (ಅಂದಾಜು ಮೌಲ್ಯ ರೂ. 3,00,000/-), ಮರದ ಹಿಡಿಯಿರುವ ಕಬ್ಬಿಣದ ಹಾರೆ – 6 (ರೂ. 800/-) ಹಾಗೂ ಪೈಬರ್ ಬುಟ್ಟಿ – 8 (ರೂ. 600/-) ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ದೇವಾನಂದ ಶೆಟ್ಟಿ (ಹಳ್ನಾಡು) ಸೇರಿದಂತೆ ಉತ್ತರ ಪ್ರದೇಶದ ಬಾರಾಬಂಕಿ ಮತ್ತು ಗೊಂಡ ಜಿಲ್ಲೆಗಳ ಮೂಲದ ಒಟ್ಟು 22 ಮಂದಿ ಎಂದು ಗುರುತಿಸಲಾಗಿದೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.





