ಪ್ರಸಿದ್ಧ ಕವಿ ಕುರಾಡಿ ಸೀತಾರಾಮ ಅಡಿಗರ ಸ್ಮರಣಾರ್ಥ ನೀಡಲಾಗುವ ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ – 2025” ಅನ್ನು ಈ ವರ್ಷ ಬೆಂಗಳೂರಿನ ಕವಿ ಶಶಿ ತರೀಕೆರೆ ಅವರ ‘ಪ್ಯೂಪಾ’ ಕವನ ಸಂಕಲನಕ್ಕೆ ನೀಡಲು ಆಯ್ಕೆ ಮಾಡಲಾಗಿದೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿಯ ಸಂಚಾಲಕರಾದ ರವಿರಾಜ್ ಎಚ್.ಪಿ ತಿಳಿದರು.
ಉಡುಪಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿಗೆ ಈ ಬಾರಿ ಒಟ್ಟು 88 ಕವನ ಸಂಕಲನಗಳು ಸ್ಪರ್ಧೆಗೆ ಬಂದಿದ್ದವು. ಅದರಲ್ಲಿ ಶಶಿ ತರೀಕೆರೆ ಅವರ ‘ಪ್ಯೂಪಾ’ ಕವನ ಸಂಕಲನವನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯ ತೀರ್ಪುಗಾರರಾಗಿ ಕನ್ನಡ ಸಾಹಿತ್ಯ ಲೋಕದ ಹಿರಿಯ ಚಿಂತಕ ಶೂದ್ರ ಶ್ರೀನಿವಾಸ್ ಹಾಗೂ ವಿಮರ್ಶಕರಾದ ಪ್ರೊ. ಎಚ್. ದಂಡಪ್ಪ ಕಾರ್ಯ ನಿರ್ವಹಿಸಿದ್ದಾರೆ ಎಂದು ತಿಳಿದರು.
ಪ್ರಶಸ್ತಿ ಸಮಿತಿಯ ಸಂಚಾಲಕಿ ಪೂರ್ಣಿಮಾ ಜನಾರ್ದನ್ ಮಾತನಾಡಿ, ಪ್ರಶಸ್ತಿಯು ₹10,000 ನಗದು, ಪ್ರಶಸ್ತಿಪತ್ರ, ಹಾಗೂ ಫಲಕವನ್ನು ಒಳಗೊಂಡಿದ್ದು, ನವೆಂಬರ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉಡುಪಿ ಯಲ್ಲಿ ಜರುಗಲಿದೆ ಎಂದು ತಿಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ವಿಶ್ವ ಭಾರತ ಕರ್ನಾಟಕ ಪ್ರತಿಷ್ಠಾನದ ನಿರ್ದೇಶಕ ನಾರಾಯಣ ಮಡಿ, ಹಾಗೂ ಕವಿತಾ ಎನ್. ಮಡಿ ಉಪಸ್ಥಿತರಿದ್ದರು.





