ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಉಡುಪಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಹಾಗೂ ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಇಂದು ಉದ್ಯಾವರದ ಎಂ.ಇ.ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಕಾರ್ಯಕ್ರಮವು ವಿಶೇಷತೆ ಪಡೆದಿತು.
ಕಾರ್ಯಕ್ರಮವು ಹಫೀಜ್ ಹಸನ್ ಉಡುಪಿಯವರ ಖುರಾನ್ ಪಠಣದಿಂದ ಆರಂಭವಾಗಿ, ಮೀಫ್ ಉಡುಪಿ ಘಟಕದ ಗೌರವಾಧ್ಯಕ್ಷ ಶಭೀ ಅಹಮದ್ ಖಾಜಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಬಳಿಕ ಮೀಫ್ ಸೆಂಟ್ರಲ್ ಜೋನ್ (ಮಂಗಳೂರು) ಅಧ್ಯಕ್ಷ ಪಿ. ಮೂಸಬ್ಬಾ ಬ್ಯಾರಿಯವರು ಮಾತನಾಡಿ, ಮೀಫ್‌ನ ಉದ್ದೇಶ, ಶಿಕ್ಷಣ ಕ್ಷೇತ್ರದ ಬದಲಾವಣೆಗಳು ಹಾಗೂ ಮುಂದಿನ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಮೀಫ್ ಉಡುಪಿ ಜಿಲ್ಲಾ ಘಟಕದ ಅಧಿಕೃತ ಉದ್ಘಾಟನೆಯನ್ನು ಅಲಿಮಾ ಸಬ್ಜು ಸಭಾಂಗಣ ಅಧ್ಯಕ್ಷ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೀಫ್ ಸೆಂಟ್ರಲ್ ಜೋನ್ ಉಪಾಧ್ಯಕ್ಷರೂ ಹಾಗೂ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಸ್ತಫಾ ಸುಳ್ಯರವರು ಮಾತನಾಡಿ, ಮೀಫ್ ಉಡುಪಿ ಘಟಕದ ಆರಂಭದಿಂದ ಜಿಲ್ಲೆಯಲ್ಲಿ ಶಿಕ್ಷಣ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆಯಲಿದೆ, ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀಫ್ ಉಡುಪಿ ಘಟಕ ಅಧ್ಯಕ್ಷರಾದ ಮಹಮ್ಮದ್ ಮೌಲಾ ವಹಿಸಿ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಶಾಲಾ ನಿರ್ವಹಣಾ ಸಮಿತಿ ಸದಸ್ಯರು ಮತ್ತು ಮುಖ್ಯೋಪಾಧ್ಯಾಯರಿಗಾಗಿ ವಿಶೇಷ ತರಬೇತಿ ಕಾರ್ಯಕ್ರಮ ಕೂಡ ಜರಗಿತು. ಶೈಕ್ಷಣಿಕ ನಾಯಕತ್ವ, ನಿರ್ವಹಣಾ ಕೌಶಲ್ಯ, ಆಧುನಿಕ ಶಾಲಾ ಆಡಳಿತ ಮತ್ತು ಗುಣಮಟ್ಟ ಸುಧಾರಣೆ ಕುರಿತಂತೆ ಪರಿಣಾಮಕಾರಿ ಅಧಿವೇಶನ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪಿ.ಎ. ಶೈಕ್ಷಣಿಕ ಟ್ರಸ್ಟ್ (ಮಂಗಳೂರಿನ) ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ. ಸಯ್ಯಿದ್ ಅಮೀನ್ ಅಹಮ್ಮದ್ ಅವರು ಮಾರ್ಗದರ್ಶನ ನೀಡಿದರು. ಇವರ ಪರಿಚಯವನ್ನು ಮೀಫ್ ಸೆಂಟ್ರಲ್ ಜೋನ್ ಉಪಾಧ್ಯಕ್ಷ ಪರ್ವೇಜ್ ಅಲಿ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಮೀಫ್ ಉಡುಪಿ ಉಪಾಧ್ಯಕ್ಷರಾದ ಅಬ್ದುಲ್ ರಹೀಮನ್ ಕೋಡಿ, ಶೆಕಬ್ಬಾ ಹೆಜ್ಮಾಡಿ, ಮೀಫ್ ಸೆಂಟ್ರಲ್ ಜೋನ್ ಕಾರ್ಯದರ್ಶಿಗಳಾದ ಅನ್ವರ್ ಹುಸೇನ್ ಗೂಡಿನಬಳಿ, ರಹಮತುಲ್ಲಾ ಬೂರೂಜ್, ಸದಸ್ಯ ಆದಿಲ್ ಸೂಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಿಲ್ಲಾಸಂಚಾಲಕ ಅಡ್ವೊಕೇಟ್ ಒಮರ್ ಫಾರೂಕ್ ಕಾರ್ಯಕ್ರಮವನ್ನು ನಿರೂಪಿಸಿದರು. ಮೀಫ್ ಉಡುಪಿ ಘಟಕ ಪ್ರಧಾನ ಕಾರ್ಯದರ್ಶಿ ಅಸ್ಸಾಂ ಹೈಕಾಡಿ ಧನ್ಯವಾದ ಸಲ್ಲಿಸಿದರು.





