ಉಡುಪಿ ಜಿಲ್ಲೆಯ ಕೋಟ ಸಮೀಪದ ಕೋಟತಟ್ಟು ಗ್ರಾಮದ ಬಾರಿಕೆರೆಯ ಮನೆಯೊಂದರಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಮನೆಯನ್ನು ಸೊಸೈಟಿಯವರು ಹರಾಜು ಹಾಕಿದ್ದಾಗಿ ಮನೆಯವರು ಆರೋಪಿಸಿದ್ದಾರೆ.
ಬಾರಿಕೆರೆಯ ನಾಗೇಂದ್ರ ಪುತ್ರನ್, ತಂದೆ ಕೃಷ್ಣ ಬಂಗೇರ ಮತ್ತು ತಾಯಿ ಜಲಜಾ ಮರಕಾಲ್ತಿ ಅವರ ಕುಟುಂಬಕ್ಕೆ ಸೇರಿದ ಮನೆ ಇದಾಗಿದೆ. ಮನೆಯ ಜೊತೆಗೆ ಸುಮಾರು 45 ಸೆಂಟ್ಸ್ ನಷ್ಟು ಜಾಗೆ ಇಲ್ಲಿತ್ತು. ಜು.14 ರಂದು ಸೋಮವಾರ ಬೆಳಿಗ್ಗೆ ಕುಟುಂಬದ ಮನೆಯಲ್ಲಿ ತುಳಸಿ ಪೂಜೆ ಮತ್ತು ಭಜನಾ ಕಾರ್ಯಕ್ರಮ ಆಯೋಜನೆಯಾಗಿತ್ತು. ಈ ವೇಳೆ ಸ್ಥಳೀಯ ಸೊಸೈಟಿಯವರು ನಮಗೆ ನೋಟೀಸನ್ನೂ ನೀಡದೆ ಏಕಾಏಕಿ ಹರಾಜು ಹಾಕಿದ್ದಾರೆ ಎಂದು ಕೃಷ್ಣ ಬಂಗೇರ ಪುತ್ರ ನಾಗೇಂದ್ರ ಪುತ್ರನ್ ಆರೋಪ ಮಾಡಿದ್ದಾರೆ.
ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ನಾಗೇಂದ್ರ ಪುತ್ರನ್, ಈ ಮನೆಯು ಪಿತ್ರಾರ್ಜಿತ ಆಸ್ತಿಯಾಗಿದ್ದು ಕುಟುಂಬದ ವ್ಯಕ್ತಿಯೋರ್ವ ಹಲವು ವರ್ಷಗಳ ಹಿಂದೆ ಸೊಸೈಟಿಯಿಂದ ಸಾಲ ಪಡೆಯುವಾಗ ಅವನ ಮನೆ ನಂಬರ್ ನ್ನು ನೀಡಿ ಪಿತ್ರಾರ್ಜಿತ ಆಸ್ತಿ ಪತ್ರವನ್ನು ಅಡವಿಟ್ಟು ಸೊಸೈಟಿಯಿಂದ ಸಾಲ ಪಡೆದಿದ್ದಾನೆ. ಆದರೆ ಸಾಲ ನೀಡುವಾಗ ಸೊಸೈಟಿಯವರು ಸ್ಥಳ ಪರಿಶೀಲನೆ ಮಾಡದೆ ಸಾಲ ನೀಡಿದ್ದಾರೆ. ಇದರಿಂದಾಗಿ ಎರಡು ಕುಟುಂಬಗಳು ಬೀದಿಪಾಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜುಲೈ 12ರ ಶನಿವಾರದಂದು ಹರಾಜು ಪ್ರಕ್ರಿಯೆ ಇತ್ತು. ಆದರೆ ಅಂದು ಮಾಡಿರಲಿಲ್ಲ. ಇಂದು ಸೋಮವಾರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಇದ್ದಾಗ ಏಕಾಏಕಿ ಬ್ಯಾಂಕ್ ನವರು ನೊಟೀಸನ್ನೂ ನೀಡದೆ ಬಂದು ಹರಾಜು ಹಾಕಿದ್ದಾರೆ. ನ್ಯಾಯಾಲಯದ ಮೇಲೆ ನಮಗೆ ಗೌರವ ಇದೆ. ಆದರೆ ಬ್ಯಾಂಕ್ ನವರ ಕ್ರಮದ ಬಗ್ಗೆ ನಾವು ಕಾನೂನು ಹೋರಾಟ ನಡೆಸುತ್ತೇವೆ. ಇದರ ಹಿಂದೆ ರಾಜಕೀಯ ಮುಖಂಡರ ಹಿತಾಸಕ್ತಿಗಳಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ದಿನ.ಕಾಮ್ ಜೊತೆ ಮಾತನಾಡಿದ ಕೃಷ್ಣ ಬಂಗೇರ, ನಾವು ಬಹಳಷ್ಟು ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದೇವೆ. ಇವತ್ತು ಈ ರೀತಿ ನಮಗೆ ಸಮಸ್ಯೆಯಾಗಿದೆ .ನಾವಿನ್ನು ಎಲ್ಲಿಗೆ ಹೋಗುವುದು? ನಮಗೆ ಬೇರೆ ಜಾಗ ಇಲ್ಲ. ನಮಗೆ ಅನ್ಯಾಯ ಆಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಒಟ್ಟಿನಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷಿ ಅನುಭವಿಸುವ ಪರಿಸ್ಥತಿ ಎದುರಾಗಿದೆ. ಹಲವಾರು ವರ್ಷಗಳಿದಂದ ಹಲವು ಕನಸುಗಳನ್ನು ಹೊತ್ತು ಜೀವನ ಸಾಗಿಸುತ್ತಿದ್ದ ಕುಟುಂಬ ಬೀದಿಪಾಲಾಗುತ್ತಿದೆ. ಇಷ್ಟು ದಿನಗಳಿಲ್ಲದ ಸಮಸ್ಯೆ ಒಮ್ಮೆಲೆ ಬಂದಿದೆ ಎಂದರೆ ಇದರ ಹಿಂದೆ ರಾಜಕೀಯ ಪ್ರೇರಿತ ಶಕ್ತಿಗಳು ಸಹ ಒತ್ತಡಗಳನ್ನು ಹೇರಿದ್ದಾರೆ ಎಂದು ನಾಗೇಂದ್ರ ಪುತ್ರನ್ ರವರು ಹೇಳಿದ್ದಾರೆ.






