ಉಡುಪಿ ನಗರದಲ್ಲಿ ತಲವಾರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ ಜನವರಿ 30ರಂದು ರಾತ್ರಿ ಮಣಿಪಾಲದ ಹೋಟೆಲೊಂದರಲ್ಲಿ ಊಟಕ್ಕೆ ತೆರಳಿದ್ದ ಯುವಕರ ನಡುವೆ ಸಂಭವಿಸಿದ ಮಾತಿನ ಚಕಮಕಿ ಬಳಿಕ ಘಟನೆ ಗಂಭೀರ ಸ್ವರೂಪ ಪಡೆದಿದೆ. ನಂತರ ಮಾತುಕತೆ ನಡೆಸುವ ನೆಪದಲ್ಲಿ ಪಿಪಿಸಿ ಕ್ರಾಸ್ ಬಳಿ ಕರೆದೊಯ್ದು ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ ಸುಮಾರು 11:30ರ ವೇಳೆಗೆ ಪಿಪಿಸಿ ಕ್ರಾಸ್ ಸಮೀಪ ಕೋಸ್ಟಲ್ ಚಿಕನ್ ಅಂಗಡಿ ಎದುರು ರಸ್ತೆಯ ಬದಿಯಲ್ಲಿ ನಿಂತಿದ್ದ ವೇಳೆ ಟಾಟಾ ಸಫಾರಿ ಹಾಗೂ ಮಹೀಂದ್ರ ಥಾರ್ ವಾಹನಗಳಲ್ಲಿ ಬಂದ 6-7 ಮಂದಿ ಏಕಾಏಕಿ ದಾಳಿ ನಡೆಸಿದ್ದಾರೆ. ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಚೈನ್ ಬಳಸಿ ಕೊಲೆ ಯತ್ನ ನಡೆಸಲಾಗಿದೆ ಎನ್ನಲಾಗಿದೆ. ದಾಳಿಯಿಂದ ಯುವಕನ ಬಲ ಅಂಗೈ, ಮಧ್ಯದ ಬೆರಳು ಹಾಗೂ ಎಡಕೈ ಮಣಿಗಂಟು ಭಾಗಕ್ಕೆ ಗಾಯಗಳಾಗಿದ್ದು, ಅವರನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ಕೈಗೊಂಡ ಉಡುಪಿ ನಗರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರು ಹಾಗೂ ಪಿಎಸ್‌ಐ ನೇತೃತ್ವದ ತಂಡ ಫೆ.13ರಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಕ್ಷತ್ ಪೈ (27), ಸುಶಾಂತ್ (25), ರಮಾನಂದ ಪೈ (42), ಸಂತೋಷ್ ಕೊರಗ (38), ಜಶಶಾಂಕ್ ನಾಯಕ್ (25) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಹುಂಡೈ ವೆನ್ಯೂ ಕಾರು (ಅಂದಾಜು ಮೌಲ್ಯ ರೂ.8 ಲಕ್ಷ) ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.





