ಉಡುಪಿ ಶ್ರೀ ಕೃಷ್ಣ ಮಠದ ಕನಕ ಕಿಂಡಿಗೆ ತಾವು ಸೇವಾ ರೂಪದಲ್ಲಿ ಸಮರ್ಪಿಸಿದ್ದ ಸ್ವರ್ಣ ಕವಚದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿರುವುದು ತಮಗೆ ಅತ್ಯಂತ ಸಂತೋಷ ತಂದಿದೆಯಾದರೂ, ಆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ತಪ್ಪಿಹೋದ ಬಗ್ಗೆ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ನನ್ನ ಭಾಗವಹಿಸುವಿಕೆಗಾಗಿ ನಾಲ್ಕು ಬಾರಿ ಆಧಾರ್ ಕಾರ್ಡ್ ಮತ್ತು ಫೋಟೋಗಳನ್ನು ಪಡೆದಿದ್ದರು. ಆದರೆ ಪಿಎಂ ಕಚೇರಿಯಿಂದ ಬಂದ ಅಂತಿಮ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದಿರುವುದನ್ನು ನವೆಂಬರ್ 27ರ ರಾತ್ರಿ ಎಸ್ಪಿ ಮೂಲಕ ತಿಳಿದುಕೊಂಡೆ. ಇದರಿಂದ ನನಗೆ ಯಾವುದೇ ಬೇಸರ ಎಂದು ಹೇಳಿದ್ದಾರೆ.
ಇದನ್ನು ಯಾರು ತಪ್ಪಿಸಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಇಂತಹವರೇ ತಪ್ಪಿಸಿದ್ದಾರೆ ಎಂದು ದೂರು ನೀಡುವ ಉದ್ದೇಶವೂ ನನಗಿಲ್ಲ. ಯಾರಾದರೂ ತಪ್ಪಿಸಿದ್ದರೆ ಅದು ಅವರ ರಾಜಕೀಯ ತಪ್ಪು ಹೆಜ್ಜೆ ಎಂದು ಭಾವಿಸುತ್ತೇನೆ ಎಂದು ಮಧ್ವರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರ್ ನವೀನ್ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ದಿವಾಕರ್ ಶೆಟ್ಟಿ, ರೇಷ್ಮಾ ಉದಯ ಶೆಟ್ಟಿ, ಶ್ರೀನಿಧಿ ಹೆಗ್ಡೆ ಮತ್ತು ಶ್ರೀಕಾಂತ್ ನಾಯಕ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.





