ಅನುದಾನ ಬಿಡುಗಡೆಯಾಗಿಲ್ಲ ಎಂದು ಸುಳ್ಳು ಹೇಳಿಕೆಗಳನ್ನು ಹೇಳುತ್ತಾ, ಗಂಡಸುತನ ಪ್ರಶ್ನೆ ಮಾಡುವ ಹೇಳಿಕೆ ಒಬ್ಬ ಶಾಸಕನಾಗಿ ಯಶ್ಪಾಲ್ ಸುವರ್ಣರಿಗೆ ಶೋಭೆ ತರುವುದಿಲ್ಲ ಎಂದು ಉಡುಪಿಯ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ತಿರುಗೇಟು ನೀಡಿದ್ದಾರೆ.
ಉಡುಪಿಯ ಜನತೆ ನಿಮ್ಮನ್ನ ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಜನರ ಸಮಸ್ಯೆಗಳಿಗೆ ಧ್ವನಿಯಾಗುವುದರ ಜೊತೆಗೆ ಅಭಿವೃದ್ದಿಗಾಗಿ ಅನುದಾನಗಳನ್ನು ತರುವ ಕೆಲಸ ಶಾಸಕನದ್ದು. ಅನುದಾನ ತರುವಲ್ಲಿ ವಿಫಲರಾಗಿರುವ ನಿಮ್ಮ ಗಂಡಸುತನ ಎಲ್ಲಿ ಹೋಗಿದೆ ಎಂದು ಕಾಂಚನ್ ಪ್ರಶ್ನಿಸಿದ್ದಾರೆ.
ಕೇಂದ್ರದಲ್ಲಿ ನಿಮ್ಮದೆ ಬಿಜೆಪಿ ಸರ್ಕಾರ ಇದೆ ಸಾಕಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಇಂದ್ರಾಳಿ ರಸ್ತೆಗೆ ಒಮ್ಮೆ ಮುಕ್ತಿ ನೀಡಿ, ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಿ. ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆ ವೇಗದಲ್ಲಿ ನಡೆಯುತ್ತಿದೆ, ಅದಕ್ಕೆ ವೇಗ ಕೊಡುವ ಕೆಲಸ ಮಾಡ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಅನುಮತಿ ಇಲ್ಲದೆ ಬುಲ್ದೋಜರ್ ಕಾರ್ಯಾಚರಣೆಗೆ ಅವಕಾಶವಿಲ್ಲ: ಸುಪ್ರೀಂ ಕೋರ್ಟ್
ಅಭಿವೃದ್ಧಿಯ ಕೆಲಸ ಮಾಡುವುದನ್ನು ಬಿಟ್ಟು ಸದಾ ಶಾಂತಿಯಿಂದ ಕೂಡಿದ ಉಡುಪಿಯಂತಹ ಕ್ಷೇತ್ರದಲ್ಲಿ ಶಾಂತಿ ಭಂಗದಂತಹ ಹೇಳಿಕೆಗಳನ್ನು ನೀಡುವುದು, ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರ ಬಗ್ಗೆ ಅಗೌರವದ ಹೇಳಿಕೆಗಳನ್ನು ನೀಡುವುದನ್ನು ಬಿಡಿ. ಕ್ಷೇತ್ರದಲ್ಲಿ ಸೌಹಾರ್ದತೆ ಕಾಪಾಡುವ ಕೆಲಸ ಮಾಡುವುದರ ಜೊತೆಗೆ ಅನುದಾನ ತರುವ ಕೆಲಸವನ್ನು ಜವಾಬ್ದಾರಿಯುತವಾಗಿ ಮಾಡಿ ಎಂದು ಶಾಸಕರಿಗೆ ಉಡುಪಿಯ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಕಿವಿಮಾತು ಹೇಳಿದ್ದಾರೆ.





