ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 6 ಲಕ್ಷಕ್ಕೂ ಅಧಿಕ ಬೀಡಿ ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಆದರೆ ತಾವು ಎದುರಿಸುತ್ತಿರುವ ನೈಜ ಸಮಸ್ಯೆಗಳಿಗೆ ಶಾಸಕರು ಹಾಗೂ ಸಂಸದರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಬೀಡಿ ಕಾರ್ಮಿಕರ ಸಂಘವು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್, “ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ 6 ಲಕ್ಷಕ್ಕೂ ಮಿಕ್ಕಿ ಬೀಡಿ ಕಾರ್ಮಿಕರು ಇವತ್ತು ಬೀಡಿ ಕಟ್ಟಿ ತಮ್ಮ ಜೀವನ ನಡೆಸುತ್ತಿದ್ದಾರೆ. ಇವತ್ತಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಧಾರದಲ್ಲಿ ಸರಕಾರವು ಪ್ರತಿವರ್ಷ ಬೀಡಿ ಕಾರ್ಮಿಕರ ತುಟ್ಟಿಭತ್ಯೆ ಹೆಚ್ಚಳ ಮಾಡಿ ಕಾರ್ಮಿಕರು ಬದುಕಲು ಸಹಾಯವಾಗಲು ಏರಿಳಿತ ತುಟ್ಟಿಭತ್ಯೆ ಎಂಬುವುದು ಕಾನೂನು ಬದ್ಧ ಸವಲತ್ತು. ಆ ಪ್ರಕಾರ 2024 ಎಪ್ರಿಲ್ ತಿಂಗಳಿಂದ ಔದ್ಯಮಿಕ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ 568 ಪಾಯಿಂಟ್ ಆಗಿರುತ್ತದೆ. ಅದರಂತೆ 1000 ಬೀಡಿಗೆ ರೂ 22.72 ರಂತೆ ಬೀಡಿ ಕಾರ್ಮಿಕರಿಗೆ ನೀಡಬೇಕು” ಎಂದು ಒತ್ತಾಯಿಸಿದರು.
“ಬೀಡಿ ಕಂಪನಿಯ ಮಾಲೀಕರು ತುಟ್ಟಿಭತ್ಯೆ ನೀಡದೆ ಕಾರ್ಮಿಕರಿಗೆ ವಂಚನೆ ಮಾಡಿದ್ದಾರೆ. ಮಂಗಳೂರು ಸಹಾಯಕ ಕಾರ್ಮಿಕ ಅಧಿಕಾರಿಯವರು ಎರಡು ಬಾರಿ ಕಂಪನಿಯ ಮಾಲೀಕರನ್ನು ಮಾತುಕತೆ ಕರೆದರೂ ತಪ್ಪಿಸಿಕೊಳ್ಳುತ್ತಿದ್ದಾರೆ. ಸರ್ಕಾರಿ ಅಧಿಕಾರಿಯವರ ಮಾತಿಗೂ ಕಿಂಚಿತ್ತೂ ಬೆಲೆ ಕೊಡದೆ ಸತಾಯಿಸುತ್ತಿದ್ದಾರೆ” ಎಂದು ಆರೋಪಿಸಿದರು.

“ಭಾರತ್ ಬೀಡಿ, ಗಣೇಶ್ ಬೀಡಿ, ಟೆಲಿಫೋನ್ ಬೀಡಿ, ಇನ್ನೂ ಅನೇಕ ದೊಡ್ಡ ಕಂಪನಿಯ ಮಾಲೀಕರ ಪರವಾಗಿ ಇವತ್ತು ನಮ್ಮ ಶಾಸಕರು, ಸಂಸದರು ನಿಂತಿರುವ ಹಾಗೆ ಕಾಣುತ್ತದೆ. ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ 13 ಜನ ಶಾಸಕರು, 2 ಜನ ಸಂಸದರು 6 ಲಕ್ಷಕ್ಕೂ ಮಿಕ್ಕಿ ಇರುವ ಬಡ ಬೀಡಿ ಕಾರ್ಮಿಕರ ಬಗ್ಗೆ ವಿಧಾನಸಭೆಯಲ್ಲಿ ಅಥವಾ ಲೋಕಸಭೆಯಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ. ಚುನಾವಣೆ ಬರುವಾಗ ಲಕ್ಷಾಂತರ ಬೀಡಿ ಕಾರ್ಮಿಕರ ಕುಟುಂಬದ ಮತಗಳು ಬೇಕು” ಎಂದು ಆಕ್ರೋಶ ಹೊರಹಾಕಿದರು.
“ಚುನಾವಣಾ ಸಮಯದಲ್ಲಿ ಬೀಡಿ ಮಾಲಕರು ಬೇರೆ ಬೇರೆ ಪಕ್ಷಕ್ಕೆ ಹಣವನ್ನು ನೀಡುತ್ತಾರೆ ಆದರೆ ಕಾರ್ಮಿಕರು ಕಷ್ಟಪಟ್ಟು ದುಡಿದ ಹಣವನ್ನು ನೀಡಲು ಹಿಂದೇಟು ಹಾಕುವ ಮಾಲಕರ ವಿರುದ್ಧ ಸರಕಾರವು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಇತ್ತೀಚೆಗೆ ಹಲವು ಬಾರಿ ಮಂಗಳೂರು ಕಂಪನಿಯ ಪ್ರಧಾನ ಕಛೇರಿ ಮುಂದೆ ,ಹಾಗೂ ಮಂಗಳೂರು ಸಹಾಯಕ ಅಧಿಕಾರಿ ಕಛೇರಿ ಮಂದೆ ಪ್ರತಿಭಟನೆ ನಡೆಸಿದ ನಂತರ 11.40 ಪೈಸೆ ಮಾಲಕರು ಕಾರ್ಮಿಕರಿಗೆ ನೀಡಿರುತ್ತಾರೆ. ಆದರೆ, ಇದನ್ನು ಒಪ್ಪಲು ಸಾಧ್ಯವಿಲ್ಲ. ಕಾರ್ಮಿಕರಿಗೆ ಕಾನೂನು ಬದ್ಧವಾಗಿ ಸಿಗುವ 22.72 ಪೈಸೆ ಕೊಡಬೇಕು. ಹಿಂದಿನ 3 ವರ್ಷದ ಬಾಕಿ ಇರುವ ತುಟ್ಟಿಭತ್ಯೆ 12.75 ಪೈಸೆ, ಕನಿಷ್ಠ ವೇತನ ಕೂಡಲೇ ಕಾರ್ಮಿಕರಿಗೆ ನೀಡಬೇಕು” ಎಂದು ಒತ್ತಾಯಿಸಿದರು.
ಕಾರ್ಕಳ ಕಾರ್ಮಿಕ ಅಧಿಕಾರಿ ಮುಖಾಂತರ ಮಂಗಳೂರು ಸಹಾಯಕ ಕಾರ್ಮಿಕ ಅಧಿಕಾರಿಯ ಕಚೇರಿಯವರೆಗೆ ಮೆರವಣಿಗೆ ಮೂಲಕ ಮನವಿ ನೀಡಲಾಯಿತು. ಮುಂದಿನ ದಿನಗಳಲ್ಲಿ ಕಾರ್ಮಿಕ ಸಮಸ್ಯೆಗಳನ್ನು ಬಗೆಹರಿಸದೆ ಇದ್ದರೆ ಜನಪ್ರತಿನಿಧಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಬೀಡಿ ಕಾರ್ಮಿಕರ ಸಂಘದ ಮುಖಂಡರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಸುನೀತಾ ಶೆಟ್ಟಿ, ಕೋಶಾಧಿಕಾರಿ ಸುಮತಿ, ಕುಂದಾಪುರ ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಲ್ಕೀಸ್, ಉಡುಪಿ ಬೀಡಿ ಮತ್ತು ಟೋಬ್ಯಾಕೊ ಲೇಬರ್ ಯೂನಿಯನ್‌ನ ಉನಳಿನಿ. ಎಸ್ , ಸಿಐಟಿಯು ಕಾರ್ಕಳ ತಾಲೂಕು ಮುಖಂಡರಾದ ನಾಗೇಶ್, ಸಿಐಟಿಯು ಉಡುಪಿ ಮುಖಂಡರಾದ ಮೋಹನ್, ರೀತೇಶ್, ಕಾರ್ಕಳ ಬೀಡಿ ಕಂಟ್ರಾಕ್ಟರ್ ಮುಸ್ತಾಫ ಹಾಗೂ ಬೀಡಿ ಮುಖಂಡರಾದ ವಿಲಾಸಿನಿ, ಶಕುಂತಲಾ, ಸುಮಿತ್ರಾ, ಜಯಂತಿ, ಲಕ್ಷೀ, ಜಾನವಿ, ವಸಂತಿ ಶೆಟ್ಟಿ, ಲತಾ,ಮಾಲತಿ, ಜಯಂತಿ, ವನಿತ, ಕವಿತ, ಪ್ರಮೀಳಾ, ಉಷಾ ಉಪಸ್ಥಿತರಿದ್ದರು.





