ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ(ಆರ್‌ಟಿಒ ) ಲಕ್ಷೀನಾರಾಯಣ ಪಿ. ನಾಯಕ್ ಅವರ ಮನೆಯಲ್ಲಿ ಮತ್ತು ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಶೋಧ ನಡೆಸಿದ್ದಾರೆ. ಲಕ್ಷ್ಮೀನಾರಾಯಣ ಪಿ. ನಾಯಕ್ ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾಗಿದ್ದು, ಪ್ರಸ್ತುತ ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರಿಂದ ಬಂದ ದೂರಿನ ಕಾರಣ ಲೋಕಾಯುಕ್ತ ಅಧಿಕಾರಿಗಳು ಅವರ ಮನೆ ಮತ್ತು ಸಂಬಂಧಿಕರ ನಿವಾಸಗಳಲ್ಲಿ ಶೋಧ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಡುಪಿಯ ಕಿನ್ನಿಮುಲ್ಕಿಯಲ್ಲಿರುವ ಫ್ಲ್ಯಾಟ್ ನಲ್ಲಿ ಶೋಧ ಕಾರ್ಯ ನಡೆದಿದೆ. ಅಲ್ಲದೆ, ಉಡುಪಿ ತಾಲ್ಲೂಕಿನ ಪಡುಅಲೆವೂರು ಗ್ರಾಮದಲ್ಲಿರುವ ಮಧ್ಯವರ್ತಿಗಳ ಮನೆಗಳಲ್ಲೂ ಶೋಧ ನಡೆದಿದೆ ಎಂದು ಹೇಳಿವೆ.
RTO ಎಲ್.ಪಿ. ನಾಯ್ಕ ಮನೆ ಮೇಲೆ ಲೋಕಾಯುಕ್ತರ ದಾಳಿ | ಉಡುಪಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ (RTO) ಆಗಿ ಕಾರ್ಯನಿರ್ವಹಿಸುತ್ತಿರುವ ಕುಮಟಾ ಮೂಲದ ಎಲ್.ಪಿ. ನಾಯ್ಕ ಅವರ ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಕಾರವಾರ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ (ಪಿಐ) ವಿನಾಯಕ ಬಿಲ್ಲವ ಅವರ ನೇತೃತ್ವದ ತಂಡ ಈ ದಾಳಿಯನ್ನು ನಡೆಸಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದಲ್ಲಿರುವ ಎಲ್.ಪಿ. ನಾಯ್ಕ ಅವರ ವಾಣಿಜ್ಯ ಮಳಿಗೆ ಮತ್ತು ಕುಮಟಾ ತಾಲ್ಲೂಕಿನ ಚಂದಾವರ ಗ್ರಾಮದಲ್ಲಿನ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ.
ಕುಮಟಾ ಮೂಲದವರಾದ ಎಲ್.ಪಿ. ನಾಯ್ಕ ಅವರು ಆದಾಯದ ಮೂಲಕ್ಕಿಂತ ಹೆಚ್ಚು ಆಸ್ತಿ ಮತ್ತು ಹಣ ಹೊಂದಿದ್ದಾರೆಂಬ ಗಂಭೀರ ಆರೋಪದ ಮೇಲೆ ಈ ಶೋಧ ಕಾರ್ಯವನ್ನು ನಡೆಸಲಾಗಿದೆ. ಲೋಕಾಯುಕ್ತ ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.





