ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಬಾಳ್ವೆ ವೇದಿಕೆ ಶಾಂತಿಯುತ ಹೊಸ ವರ್ಷಾಚರಣೆಯ ವಾತಾವರಣವನ್ನು ಖಾತ್ರಿಪಡಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ಮಾಡಿದೆ.
ಡಿಸೆಂಬರ್ 25ರಂದು ಕ್ರಿಸ್ತ ಜಯಂತಿಯ ಆಚರಣೆಗಳು ಸಮಾಪ್ತಗೊಂಡಿದ್ದು, ಜನವರಿ 1ರ ಹೊಸ ವರ್ಷಾಚರಣೆಗೆ ಕ್ರೈಸ್ತ ಸಮುದಾಯ ಸಿದ್ಧತೆ ನಡೆಸುತ್ತಿರುವ ನಡುವೆ, ದೇಶದ ವಿವಿಧ ಭಾಗಗಳಲ್ಲಿ ಭಯಭೀತಿಯ ವಾತಾವರಣ ನಿರ್ಮಾಣವಾಗಿದೆ ಎಂದು ವೇದಿಕೆ ಆತಂಕ ವ್ಯಕ್ತಪಡಿಸಿದೆ. ಕೇರಳ, ದೆಹಲಿ, ಅಸ್ಸಾಂ, ಒಡಿಶಾ, ಉತ್ತರ ಪ್ರದೇಶ ಹಾಗೂ ಛತ್ತೀಸ್ಗಡ ರಾಜ್ಯಗಳಲ್ಲಿ ಕ್ರಿಸ್ತ ಜಯಂತಿ ಆಚರಣೆ ವೇಳೆ ಬಲಪಂಥೀಯ ಸಂಘಟನೆಗಳಿಂದ ಪುಡಾಂಟಿಕೆ ಹಾಗೂ ಹಲ್ಲೆ ನಡೆದಿರುವ ಘಟನೆಗಳು ವರದಿಯಾಗಿವೆ ಎಂದು ತಿಳಿಸಿದೆ.
ಒಂದು ಕಡೆ ದೇಶದ ಪ್ರಧಾನಮಂತ್ರಿಗಳು ಹಬ್ಬದ ಆಚರಣೆಗಳಲ್ಲಿ ಭಾಗವಹಿಸಿ ಶಾಂತಿಯ ಸಂದೇಶ ಸಾರುತ್ತಿರುವಾಗ, ಮತ್ತೊಂದು ಕಡೆ ಸಂಘಪರಿವಾರಕ್ಕೆ ಸೇರಿದ ಕೆಲವು ಸಂಘಟನೆಗಳು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದು ದುರದೃಷ್ಟಕರ ಎಂದು ಸಹಬಾಳ್ವೆ ಅಭಿಪ್ರಾಯಪಟ್ಟಿದೆ. ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಲ್ಲಿ ಕಾನೂನು ಪಾಲಕರು ವಿಳಂಬ ಧೋರಣೆ ಅನುಸರಿಸುತ್ತಿರುವುದು ಗಂಭೀರ ವಿಚಾರವಾಗಿದೆ ಎಂದು ಹೇಳಿದೆ.
ಈ ಬೆಳವಣಿಗೆಗಳು ದೇಶದ ವೈವಿಧ್ಯಮಯ ಧಾರ್ಮಿಕ ಆಚರಣೆಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ಪ್ರಭುತ್ವದ ನಿರ್ಲಕ್ಷ್ಯವನ್ನು ತೋರಿಸುತ್ತಿವೆ ಎಂದು ಸಹಬಾಳ್ವೆ ಟೀಕಿಸಿದೆ. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಬೆಳೆಸುವ ಉದ್ದೇಶ ಹೊಂದಿರುವ ವೇದಿಕೆ, ಈ ಮತೀಯ ಹಲ್ಲೆಗಳನ್ನು ತೀವ್ರವಾಗಿ ಖಂಡಿಸಿದೆ.
ಎಲ್ಲ ನಾಗರಿಕರೂ ಭಯವಿಲ್ಲದೆ, ಶಾಂತಿಯುತವಾಗಿ ಹೊಸ ವರ್ಷವನ್ನು ಆಚರಿಸಬಹುದಾದ ವಾತಾವರಣ ನಿರ್ಮಿಸುವುದು ಸರಕಾರಗಳ ಸಂವಿಧಾನಿಕ ಕರ್ತವ್ಯವಾಗಿದೆ. ತೋರಿಕೆಯ ಸಂದೇಶಗಳಿಗೆ ಸೀಮಿತವಾಗದೆ, ನೈಜ ಕ್ರಮಗಳ ಮೂಲಕ ಶಾಂತಿ-ಸೌಹಾರ್ದವನ್ನು ಕಾಯ್ದುಕೊಳ್ಳಬೇಕು ಎಂದು ಸಹಬಾಳ್ವೆ ಸರಕಾರಗಳಿಗೆ ಆಗ್ರಹಿಸಿದೆ.
ಈ ಕುರಿತು ಸಹಬಾಳ್ವೆ ವೇದಿಕೆಯ ಪ್ರಧಾನ ಸಂಚಾಲಕ ಕೆ. ಫಣಿರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





