ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದ ಕುಕ್ಕುಂಜಾರು ನಿವಾಸಿ ಕರುಣಾಕರ ಶೆಟ್ಟಿಯವರ ಮಗ ಶ್ರೀಶಾನ್ ಕೆ. ಶೆಟ್ಟಿ (16) ಕಾಣೆಯಾಗಿರುವ ಕುರಿತು ಉಡುಪಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಬಳಿಕ ಹುಡುಕಾಟದ ವೇಳೆ ಯುವಕನ ಮೃತದೇಹ ಪತ್ತೆಯಾದ ಘಟನೆ ಬಗ್ಗೆ ವರದಿಯಾಗಿತ್ತು.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಶ್ರೀಶಾನ್ ಕೆ. ಶೆಟ್ಟಿ ಹಿರಿಯಡಕ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ನವೆಂಬರ್ 9 ರಂದು ಮಧ್ಯಾಹ್ನ 12.15 ಗಂಟೆಗೆ ತನ್ನ ತಂದೆಯೊಂದಿಗೆ ದ್ವಿಚಕ್ರ ವಾಹನ (ಕೆಎ20 ಹೆಚ್‌ಡಿ 4227) ನಲ್ಲಿ ಪೆರ್ಡೂರಿಗೆ ತೆರಳಿದ್ದನು. ಅಲ್ಲಿ ತಂದೆಯನ್ನು ಬಿಟ್ಟು ಅಜ್ಜಿ ಮನೆಯಾದ ಅಲಂಗಾರಿಗೆ ಹೋಗಿದ್ದ. ಅಜ್ಜಿ ಮೊಬೈಲ್‌ನಿಂದ ತಂದೆಗೆ ಕರೆ ಮಾಡಿ, “ನಾನು ಅಜ್ಜಿ ಮನೆಯ ಬಳಿ ಇರುವ ನದಿಗೆ ಆಟವಾಡಲು ಹೋಗುತ್ತಿದ್ದೇನೆ” ಎಂದು ತಿಳಿಸಿದ್ದ.
ಆದರೆ ಮಧ್ಯಾಹ್ನ 3 ಗಂಟೆಯಾದರೂ ಮನೆಗೆ ಮರಳದ ಕಾರಣ ಕರುಣಾಕರ ಶೆಟ್ಟಿಯವರು ಅಜ್ಜಿಗೆ ಕರೆಮಾಡಿ ವಿಚಾರಿಸಿದಾಗ, “ಶ್ರೀಶಾನ್ ಮನೆಗೆ ಬಂದಿಲ್ಲ” ಎಂಬ ಉತ್ತರ ಸಿಕ್ಕಿತು. ತಕ್ಷಣ ಕುಟುಂಬಸ್ಥರು ಹಾಗೂ ಸ್ಥಳೀಯರು ಅಲಂಗಾರು, ಪೆರ್ಡೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಶ್ರೀಶಾನ್ ಪತ್ತೆಯಾಗಲಿಲ್ಲ. ಘಟನೆಯ ಬಗ್ಗೆ ಚಿಂತೆಗೊಂಡ ತಂದೆಯಾದ ಕರುಣಾಕರ ಶೆಟ್ಟಿಯವರು ಉಡುಪಿ ಠಾಣೆಗೆ ಬಂದು ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ, ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಯಿತು.
ಮಾರನೇ ದಿನ ನವೆಂಬರ್ 10ರಂದು ಸಂಜೆ 4 ಗಂಟೆ ಸಮಯಕ್ಕೆ ಕುಕ್ಕುಂಡಿ ಹೊಳೆಬಾಗಿಲು ಮಡಿಸಾಲು ಹೊಳೆಯಲ್ಲಿ ಶ್ರೀಶಾನ್‌ನ ಮೃತದೇಹ ಪತ್ತೆಯಾಯಿತು. ಈ ಕುರಿತು ಮೃತನ ತಂದೆಯಿಂದ ಮತ್ತೊಂದು ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಮೃತದೇಹವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕಳುಹಿಸಿ ಶವಪರೀಕ್ಷೆ ನಡೆಸಲಾಗಿದೆ. ಶವಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಘಟನಾ ಸ್ಥಳಕ್ಕೆ ಠಾಣಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು.
ಪೊಲೀಸರು ತನಿಖೆ ವೇಳೆ ಶ್ರೀಶಾನ್‌ನ ಸ್ನೇಹಿತನಾದ ಪೆರ್ಡೂರಿನ ನವೀನ್ ಎಂಬ ಯುವಕನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ. ನವೀನ್ ನೀಡಿದ ಹೇಳಿಕೆ ಪ್ರಕಾರ, ಶ್ರೀಶಾನ್ ಮಧ್ಯಾಹ್ನ 12 ಗಂಟೆ ಸುಮಾರಿಗೆ ನನ್ನ ಬಳಿ ಬಂದು ‘ಸೇತುವೆಗೆ ಹೋಗೋಣ’ ಎಂದು ಹೇಳಿದ್ದು. ನನ್ನ ಬೈಕ್‌ನಲ್ಲಿ ಪೆಟ್ರೋಲ್ ಕಡಿಮೆ ಇದ್ದುದರಿಂದ ಹೋಗಲಾರೆ ಎಂದು ಹೇಳಿದಾಗ, ಆತ ತನ್ನ ಸ್ಕೂಟರ್ ತೆಗೆದುಕೊಂಡು ಬಂದು ನಾವಿಬ್ಬರೂ ಕುಕ್ಕುಂಡಿ ಹೊಳೆಯ ಕಡೆಗೆ ಹೋಗಿದೆವು. ಹೊಳೆಯ ಬಳಿಯಲ್ಲಿ ಸ್ಕೂಟರ್ ಹೋಗದ ಕಾರಣ ಹಾಡಿಯಲ್ಲೇ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಹೊಳೆಯ ಕಡೆ ಇಳಿದೆವು. ಶ್ರೀಶಾನ್ ತನ್ನ ಶರ್ಟ್, ಬರ್ಮುಡ ಮತ್ತು ಚಪ್ಪಲಿಯನ್ನು ಸ್ಕೂಟರ್‌ನ ಬಳಿಯೇ ಬಿಚ್ಚಿಟ್ಟು ನೀರಿನಲ್ಲಿ ಇಳಿದನು. ನಾನು ದಡದಲ್ಲಿ ನಿಂತಿದ್ದೆ. ಆತ ನೀರಿನಲ್ಲಿ ಮುಂದೆ ಸಾಗುತ್ತಿದ್ದಾಗ ಕಾಲು ಜಾರಿತು. ನಾನು ಹಿಡಿಯಲು ಪ್ರಯತ್ನಿಸುವಷ್ಟರಲ್ಲಿ ಆತ ಹೊಳೆಯ ಆಳವಾದ ಭಾಗದಲ್ಲಿ ಮುಳುಗಿಹೋದ. ನಾನು 10 ನಿಮಿಷ ಹೊಳೆಯೊಳಗೆ ಹುಡುಕಿದರೂ ಪತ್ತೆಯಾಗಲಿಲ್ಲ. ಆತ ಮುಳುಗಿಹೋದನೆಂದು ಭಯಗೊಂಡು ಶರ್ಟ್ ಮತ್ತು ಬರ್ಮುಡವನ್ನು ಸ್ಕೂಟರ್‌ನ ಡಿಕ್ಕಿಯಲ್ಲಿ ಇಟ್ಟು, ಸ್ಕೂಟರ್‌ನ್ನು ಹಾಡಿಯಲ್ಲೇ ಬಿಟ್ಟು ಮನೆಗೆ ಹೋದೆ. ಮನೆಯವರಿಗೆ ಈ ಬಗ್ಗೆ ಹೇಳಿದರೆ ಅವರು ನನ್ನ ಮೇಲೆ ಕೇಸ್ ಮಾಡಬಹುದು ಎಂಬ ಭಯದಿಂದ ಮೌನವಾಗಿದ್ದೆ,” ಎಂದು ನವೀನ್ ಪೊಲೀಸರಿಗೆ ಹೇಳಿದ್ದಾನೆ.
ತನಿಖಾಧಿಕಾರಿಗಳು ನವೀನ್‌ನ ಹೇಳಿಕೆಯನ್ನು ದಾಖಲಿಸಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಶ್ರೀಶಾನ್ ಅನಾಹುತದಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಸಾಧ್ಯತೆಗಳು ಹೆಚ್ಚು ಎಂದು ಅಂದಾಜಿಸಲಾಗಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ಮರಣ ವರದಿ ಹಾಗೂ ಎಫ್‌ಎಸ್‌ಎಲ್ ವರದಿ ಬಂದ ನಂತರ ಘಟನೆಯ ನೈಜನೆ ತಿಳಿದುಬರಲಿದ್ದು, ಯಾವುದೇ ಅನುಮಾನಾಸ್ಪದ ಸಂಗತಿಗಳು ಕಂಡುಬಂದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹಾಗೂ ಅಸತ್ಯ ವದಂತಿಗಳು ಹರಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು, ಯಾವುದೇ ಊಹಾಪೋಹಗಳನ್ನು ನಂಬದಂತೆ ಹಾಗೂ ಸುಳ್ಳು ಸುದ್ದಿಗಳನ್ನು ಹಬ್ಬಿಸದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.





