ಉಡುಪಿಯಲ್ಲಿ ನಡೆದ ಶ್ರೀಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯೋತ್ಸವ ಮೆರವಣಿಗೆ ವೇಳೆ ಜಿಲ್ಲಾಧಿಕಾರಿ ಟಿ.ಕೆ ಸ್ವರೂಪ ಅವರು ಕೇಸರಿ ಧ್ವಜ ಹಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದು ಹಿಂದುತ್ವ ಕೋಮುವಾದಿ ಸಂಘಟನೆ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಧ್ವಜವಾಗಿದ್ದು, ಅದನ್ನು ಜಿಲ್ಲಾಧಿಕಾರಿ ಹಾರಿಸಿರುವುದು ರಾಜಕೀಯ ಚರ್ಚೆ ಹುಟ್ಟುಹಾಕಿದೆ. ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಜನವರಿ 18ರಂದು ಭಾನುವಾರ ಬೆಳಗಿನ ಜಾವ 3.00 ಗಂಟೆಗೆ ಮಠದಿಂದ ಪರ್ಯಾಯೋತ್ಸವ ಮೆರವಣಿಗೆಗೆ ಚಾಲನೆ ನೀಡಲಾಗಿತ್ತು. ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಸ್ವರೂಪ ಅವರು ಚಾಲನೆ ನೀಡಿದರು. ಈ ವೇಳೆ, ಅವರು ಕೇಸರಿ ಧ್ವಜ ಹಾರಿಸಿದ್ದಾರೆ. ಸರ್ಕಾರಿ ಅಧಿಕಾರಿಯೊಬ್ಬರು ಕೋಮುವಾದಿ ಸಂಘಟನೆಯ ಧ್ವಜ ಹಾರಿಸಿದ್ದನ್ನು ಕಾಂಗ್ರೆಸ್ ಮತ್ತು ಹಲವರು ಖಂಡಿಸಿದ್ದಾರೆ. ಅವರ ವಿರುದ್ಧ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್‌ನ ಕಾನೂನು ಮತ್ತು ಮಾನವ ಹಕ್ಕುಗಳ ಘಟಕವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.
ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಹರೀಶ್ ಶೆಟ್ಟಿ ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ, “ಜೋಡು ಕಟ್ಟೆಯಿಂದ ಕೃಷ್ಣ ಮಠದವರೆಗೆ ನಡೆದ ಮೆರವಣಿಗೆಗೆ ಮುಂಚಿತವಾಗಿ, ಉಡುಪಿ ಬಿಜೆಪಿ ಶಾಸಕಿ ಯಶ್ಪಾಲ್ ಸುವರ್ಣ ಅವರು ಜಿಲ್ಲಾಧಿಕಾರಿಗೆ ಆರ್‌ಎಸ್‌ಎಸ್ ಧ್ವಜವನ್ನು ಹಸ್ತಾಂತರಿಸಿದರು. ಅದನ್ನು ಜಿಲ್ಲಾಧಿಕಾರಿ ಸಾರ್ವಜನಿಕವಾಗಿ ಹಾರಿಸಿದರು” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ‘ತನ್ನ ಕಾಲಿಗೆ ತಾನೇ ಗುಂಡು ಹಾರಿಸಿಕೊಂಡ ಟ್ರಂಪ್’; ಆಮದು ಸುಂಕದಲ್ಲಿ 96% ಹೊರೆ ಅಮೆರಿಕನ್ನರೇ ಹೊರುತ್ತಿದ್ದಾರೆ!
“ಜಿಲ್ಲಾಧಿಕಾರಿಗಳ ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ. ಇದು ಅಧಿಕಾರಿಯ ಸೇವಾ ನಿಯಮಗಳಿಗೆ ವಿರುದ್ಧವಾಗಿದೆ. ಸಂವಿಧಾನದಲ್ಲಿನ ಜಾತ್ಯತೀತತೆಯ ತತ್ವಗಳಿಗೆ ವಿರುದ್ಧವಾಗಿದೆ. ಅವರ ನಡೆಯ ಕುರಿತು ತನಿಖೆ ಮಾಡಬೇಕು ಮತ್ತು ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಇನ್ನು, ತಮ್ಮ ವಿರುದ್ಧದ ಆರೋಪ-ಆಕ್ರೋಶಗಳ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಸ್ವರೂಪ, “ಪರ್ಯಾಯೋತ್ಸವ ಕಾರ್ಯಕ್ರಮಕ್ಕೆ ಉಡುಪಿ ನಗರ ಪರಿಷತ್ತಿನ ಆಡಳಿತಾಧಿಕಾರಿಯಾಗಿ ನನ್ನ ಕರ್ತವ್ಯದ ನಿಮಿತ್ತ ಚಾಲನೆ ನೀಡಿದ್ದೇನೆ. ಅದೇ ರೀತಿ, ನೂತನ ಪರ್ಯಾಯ ಸ್ವಾಮೀಜಿಯ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮತ್ತು ಸ್ವಾಮೀಜಿ ಸರ್ವಜ್ಞ ಪೀಠವನ್ನು ಏರಿದ ನಂತರದ ದರ್ಬಾರ್ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೇನೆ. ಇದು ರಾಜಕೀಯ ಪ್ರೇರಿತ ಭಾಗವಹಿಸುವಿಕೆಯಲ್ಲ ಎಂಬುದನ್ನು ಸಾರ್ವಜನಿಕರ ಗಮನಕ್ಕೆ ತರಲು ನಾನು ಬಯಸುತ್ತೇನೆ” ಎಂದು ಹೇಳಿದ್ದಾರೆ.




