ಹೊಸ ವರ್ಷಾಚರಣೆ, ಕ್ರಿಸ್ಮಸ್ ಸೇರಿದಂತೆ ಇತರೆ ಹಬ್ಬಗಳ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತೆ ಕಾಪಾಡುವ ಉದ್ದೇಶದಿಂದ ಉಡುಪಿ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 24 ರಿಂದ 31 ವರೆಗೆ ಜಿಲ್ಲಾದ್ಯಂತ ವಿಶೇಷ ಕಾರ್ಯಾಚರಣೆ (ಸ್ಪೆಷಲ್ ಡ್ರೈವ್) ನಡೆಸಲಾಗಿದೆ.
ಈ ವಿಶೇಷ ಕಾರ್ಯಾಚರಣೆಯ ಭಾಗವಾಗಿ ಜಿಲ್ಲೆಯಲ್ಲಿ ಒಟ್ಟು 29 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಯ ಎಲ್ಲಾ ಸಂಚಾರ ಹಾಗೂ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಕಾರ್ಯಾಚರಣೆಯ ಅವಧಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ಒಟ್ಟು 1199 ಪ್ರಕರಣಗಳನ್ನು ದಾಖಲಿಸಲಾಗಿದ್ದು, ರೂ. 9,62,400 ದಂಡವನ್ನು ವಿಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ಅದರಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ – 103 ಪ್ರಕರಣಗಳು, ಹೆಲ್ಮೆಟ್ ಧರಿಸದೇ ಚಾಲನೆ – 803 ಪ್ರಕರಣಗಳು, ಸೀಟ್ ಬೆಲ್ಟ್ ಧರಿಸದೇ ಚಾಲನೆ – 243 ಪ್ರಕರಣಗಳು, ಟ್ರಿಪಲ್ ರೈಡಿಂಗ್ – 35 ಪ್ರಕರಣಗಳು, ಚಾಲನೆ ವೇಳೆ ಮೊಬೈಲ್ ಬಳಕೆ – 15 ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದ್ದಾರೆ.





