ಉಡುಪಿ ನಗರದ ಮಿಷನ್ ಕಾಂಪೌಂಡ್ ಮೈದಾನದಲ್ಲಿ ಮೂರು ದಿನಗಳ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮಕ್ಕೆ ಶುಕ್ರವಾರ ಅದ್ದೂರಿಯಾಗಿ ಚಾಲನೆ ದೊರೆಯಿತು. ಶಾಂತಿ, ನಂಬಿಕೆ ಮತ್ತು ಆಧ್ಯಾತ್ಮಿಕ ಪರಿವರ್ತನೆಯ ಸಂದೇಶ ಸಾರುವ ಈ ಮಹೋತ್ಸವಕ್ಕೆ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಪ್ರೆಷೀತ ಆಡಳಿತಾಧಿಕಾರಿ ಅತಿ ವಂ| ಡಾ| ಜೆರಾಲ್ಡ್ ಐಸಾಕ್ ಲೋಬೊ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಾಧಾನ ಮಹೋತ್ಸವವು ಹೃದಯಗಳ ಪರಿವರ್ತನೆ, ನಂಬಿಕೆಯ ನವೀಕರಣ ಮತ್ತು ಶಾಂತಿಯ ಅನುಭವಕ್ಕೆ ದೇವರು ನೀಡಿದ ಅಪೂರ್ವ ಅವಕಾಶವಾಗಿದೆ ಎಂದು ಹೇಳಿದರು. ಬೈಬಲ್ ಪ್ರತಿಯೊಬ್ಬರಿಗೂ ಶಾಂತಿಯ ಆಳವಾದ ಅರ್ಥವನ್ನು ಬೋಧಿಸುತ್ತದೆ. ಯೇಸು ಕ್ರಿಸ್ತನ ಸಂದೇಶವು ಶಾಶ್ವತ ಶಾಂತಿಯ ಮಾರ್ಗವನ್ನು ತೋರಿಸುತ್ತದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ದೇಶದಲ್ಲಿ ಪ್ರತಿಯೊಂದು ಧರ್ಮಕ್ಕೂ ತಮ್ಮ ಆಚರಣೆಗಳಿಗೆ ಮುಕ್ತ ಅವಕಾಶವಿದ್ದು, ಪರಸ್ಪರ ಗೌರವದಿಂದ ಮಾತ್ರ ಶಾಂತಿಯ ಸಾರ್ಥಕತೆ ಸಾಧ್ಯವೆಂದು ಹೇಳಿದರು.

ಸಿಎಸ್‌ಐ ಕರ್ನಾಟಕ ಸದರ್ನ್ ಡಯಾಸಿಸ್ ಧರ್ಮಾಧ್ಯಕ್ಷ ಅತಿ ವಂ| ಹೇಮಚಂದ್ರ ಕುಮಾರ್ ಮಾತನಾಡಿ, ಈ ಮಹೋತ್ಸವವು ಜನರ ಆಧ್ಯಾತ್ಮಿಕ ಶಕ್ತಿಯನ್ನು ಬಲಗೊಳಿಸಲಿ ಎಂದು ಆಶಿಸಿದರು. ಕಾರ್ಯಕ್ರಮಕ್ಕೂ ಮುನ್ನ 200ಕ್ಕೂ ಹೆಚ್ಚು ಮಂದಿಯಿಂದ ಸ್ತುತಿಗೀತೆಗಳ ಗಾಯನ ನಡೆಯಿತು.
ಮೂರು ದಿನಗಳ ಕಾಲ ನಡೆಯಲಿರುವ ಭಕ್ತಿ ಕೂಟಗಳಲ್ಲಿ ಘನ ಮೋಹನ್ ಸಿ. ಲಾಝರಸ್, ಪಾಸ್ಟರ್ ಟಿ.ವಿ. ಗೋಪಿನಾಥನ್ ಸೇರಿದಂತೆ ಹಲವರು ಭಾಗವಹಿಸುತ್ತಿದ್ದಾರೆ.

ಇದೇ ವೇಳೆ, ಸಮಾಧಾನ ಮಹೋತ್ಸವಕ್ಕೆ ವಿರೋಧ ವ್ಯಕ್ತಪಡಿಸಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗೋವಿಂದ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಿಷನ್ ಕಾಂಪೌಂಡ್ ಕಡೆಗೆ ಮೆರವಣಿಗೆ ನಡೆಸಲು ಯತ್ನಿಸಿದ ವೇಳೆ ಪೊಲೀಸರು ತಡೆದು, ಮುನ್ನೆಚ್ಚರಿಕಾ ಕ್ರಮವಾಗಿ ಹಲವರನ್ನು ವಶಕ್ಕೆ ಪಡೆದರು.
ವಶಕ್ಕೆ ಪಡೆದ ಕಾರ್ಯಕರ್ತರನ್ನು ಮಣಿಪಾಲ ಪೊಲೀಸ್ ಠಾಣೆಗೆ ಕರೆದೊಯ್ದು ನಂತರ ಬಿಡುಗಡೆಗೊಳಿಸಲಾಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.





