ಇದೇ ಮಾರ್ಚ್ 20, 21 ಮತ್ತು 22ರಂದು ಉಡುಪಿ ನಗರದ ಮಿಷನ್ ಕಾಂಪೌಂಡ್ ಪರಿಸರದಲ್ಲಿ ತಮಿಳುನಾಡಿನ ವಿವಾದಾತ್ಮಕ ಮಿಷನರಿ ಮೋಹನ್ ಸಿ. ಲಾಝರಸ್ ನೇತೃತ್ವದಲ್ಲಿ ಆಯೋಜಿಸಲಾಗಿರುವ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದರೆ ಜಿಲ್ಲೆಯಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ಸಂಘಟನೆಯು ಎಚ್ಚರಿಕೆ ನೀಡಿದೆ.
ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ, “ಸಮಾಧಾನದ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ಮತಾಂತರಕ್ಕೆ ಪ್ರಚೋದನೆ ನೀಡುವ ಷಡ್ಯಂತ್ರವಾಗಿದ್ದು, ಜಿಲ್ಲೆಯಲ್ಲಿ ಧಾರ್ಮಿಕ ಅಶಾಂತಿ ಉಂಟುಮಾಡುವ ಸಾಧ್ಯತೆ ಇದೆ. ಆದ್ದರಿಂದ ಜಿಲ್ಲಾಡಳಿತವು ಕೂಡಲೇ ಈ ಕಾರ್ಯಕ್ರಮಕ್ಕೆ ತಡೆ ನೀಡಬೇಕು” ಎಂದು ಆಗ್ರಹಿಸಿದರು.
ಮೋಹನ್ ಸಿ. ಲಾಝರಸ್ ಅವರು ಈ ಹಿಂದೆ ಹಿಂದೂ ದೇವಾಲಯಗಳನ್ನು “ಸೈತಾನನ ನೆಲೆಗಳು” ಎಂದು ಹೇಳುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ ಅವರು, ಈ ಸಂಬಂಧ ತಮಿಳುನಾಡಿನ ಹಲವು ಪೊಲೀಸ್ ಠಾಣೆಗಳಲ್ಲಿ ಐಪಿಸಿ ಸೆಕ್ಷನ್ 153A ಮತ್ತು 295A ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು.
ಇದಲ್ಲದೆ, ಲಾಝರಸ್ ಅವರ ‘ಜೀಸಸ್ ರಿಡೀಮ್ಸ್’ ಸಂಸ್ಥೆಯು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಉಲ್ಲಂಘಿಸಿ ವಿದೇಶಿ ಹಣವನ್ನು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಚಟುವಟಿಕೆಗಳಿಗೆ ಬಳಸಿದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು 2024ರ ಮಾರ್ಚ್‌ನಲ್ಲಿ ಸಂಸ್ಥೆಯ ಪರವಾನಗಿಯನ್ನು ಅಮಾನತುಗೊಳಿಸಿದೆ ಎಂಬುದನ್ನೂ ಅವರು ಉಲ್ಲೇಖಿಸಿದರು.

ಸಮಾಧಾನದ ಹೆಸರಿನಲ್ಲಿ ಜನರನ್ನು ಸೇರಿಸಿ ರೋಗವಾಸಿ ಮಾಡುವುದಾಗಿ ಹೇಳುವುದು ಅಥವಾ ವಿವಿಧ ಆಮಿಷಗಳನ್ನು ಒಡ್ಡಿ ಮತಾಂತರಕ್ಕೆ ಪ್ರೇರೇಪಿಸುವ ಚಟುವಟಿಕೆಗಳಲ್ಲಿ ಈ ಸಂಘಟನೆ ತೊಡಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ಹೇಳಿದರು.
ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿ ಕಾರ್ಯಕ್ರಮವನ್ನು ತಕ್ಷಣವೇ ರದ್ದುಗೊಳಿಸುವಂತೆ ಆಗ್ರಹಿಸಲಾಗಿದೆ. ಒಂದು ವೇಳೆ ಜಿಲ್ಲಾಡಳಿತವು ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ ಅಥವಾ ಮೋಹನ್ ಸಿ. ಲಾಝರಸ್ ಅವರನ್ನು ಜಿಲ್ಲೆಗೆ ಪ್ರವೇಶಿಸಲು ಅವಕಾಶ ನೀಡಿದರೆ ಜಿಲ್ಲೆಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಮೂಲಕ ಉಂಟಾಗುವ ಯಾವುದೇ ಅಹಿತಕರ ಘಟನೆಗಳಿಗೆ ಜಿಲ್ಲಾಡಳಿತ ಮತ್ತು ಕಾರ್ಯಕ್ರಮದ ಆಯೋಜಕರೇ ಹೊಣೆಗಾರರಾಗಿರುತ್ತಾರೆ ಎಂದು ಅವರು ಹೇಳಿದರು.





