ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಧಾರ್ಮಿಕ ಆಚರಣೆಗಳು ನಾಗರಿಕರ ಮೂಲಭೂತ ಹಕ್ಕಾಗಿದ್ದು, ಅದನ್ನು ನಿರ್ಬಂಧಿಸುವ ಅಥವಾ ತಡೆಯೊಡ್ಡುವ ಅಧಿಕಾರ ಯಾರಿಗೂ ಇಲ್ಲ ಎಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಉಡುಪಿ ಜಿಲ್ಲಾ ಘಟಕ ತಿಳಿಸಿದೆ.
ಉಡುಪಿಯಲ್ಲಿ ಕ್ರೈಸ್ತ ಸಮುದಾಯ ಹಮ್ಮಿಕೊಂಡಿರುವ ‘ಸಮಾಧಾನ ಮಹೋತ್ಸವ’ಕ್ಕೆ ಹಿಂದೂ ಜಾಗರಣ ವೇದಿಕೆಯ ಕೆಲವು ಮಂದಿ ವಿರೋಧ ವ್ಯಕ್ತಪಡಿಸುತ್ತಿರುವುದು ಸಂವಿಧಾನಬಾಹಿರ ನಡೆಯಾಗಿದ್ದು, ಇಂತಹ ಕ್ರಮಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಅಪಾಯಕಾರಿ ಪ್ರಯತ್ನಗಳಾಗಿವೆ ಎಂದು ಸಂಘಟನೆ ಆರೋಪಿಸಿದೆ.
ಪ್ರಸ್ತುತ ಕ್ರೈಸ್ತ ಬಾಂಧವರು ಪವಿತ್ರ ಶಿಲುಬೆಯ ಶ್ರಮದಿನದ ಧ್ಯಾನಕಾಲದಲ್ಲಿ ತೊಡಗಿಕೊಂಡಿದ್ದು, ಪ್ರತಿವರ್ಷವೂ ಈ ಅವಧಿಯಲ್ಲಿ ಸಮಾಧಾನ ಮಹೋತ್ಸವವನ್ನು ಆಯೋಜಿಸುವುದು ಸಂಪ್ರದಾಯವಾಗಿದೆ. ಇದನ್ನು ವಿರೋಧಿಸುವ ಮೂಲಕ ಶಾಂತಿ-ಸೌಹಾರ್ದತೆ ಕದಡುವ ಪ್ರಯತ್ನ ಸರಿಯಲ್ಲ ಎಂದು ತಿಳಿಸಿದೆ.

ಧಾರ್ಮಿಕ ನಂಬಿಕೆಗಳನ್ನು ಆಚರಿಸುವ ಹಕ್ಕು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನವಾಗಿ ಲಭ್ಯವಿದ್ದು, ಅದಕ್ಕೆ ತಡೆಯೊಡ್ಡುವ ಅಧಿಕಾರ ಯಾರಿಗೂ ಇಲ್ಲ. ಸಮಾಧಾನ ಮಹೋತ್ಸವ ಕ್ರೈಸ್ತರ ಆಧ್ಯಾತ್ಮಿಕ ಕಾರ್ಯಕ್ರಮವಾಗಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸುವ ಹಕ್ಕು ಯಾರಿಗೂ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಹಿಂದೂ ಜಾಗರಣ ವೇದಿಕೆಯ ಕೆಲ ಮುಖಂಡರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಈ ಹಿಂದೆ ಕೂಡ ಇಂತಹ ಆರೋಪಗಳು ಕೇಳಿಬಂದಿವೆ. ಉಡುಪಿ ಶಾಂತಿ ಪ್ರಿಯ ನಾಗರಿಕರ ಜಿಲ್ಲೆಯಾಗಿದ್ದು, ಧಾರ್ಮಿಕ ಅಲ್ಪಸಂಖ್ಯಾತರ ಆಚರಣೆಗಳ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡುವುದು ಅಕ್ಷಮ್ಯ ಎಂದು ಸಾಲಿಡಾರಿಟಿ ತಿಳಿಸಿದೆ.
ಇಂತಹವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸಮಾಧಾನ ಮಹೋತ್ಸವಕ್ಕೆ ಭದ್ರತೆ ಒದಗಿಸಿ ಸಂವಿಧಾನದ ಆಶಯವನ್ನು ಎತ್ತಿಹಿಡಿಯಬೇಕು ಎಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಉಡುಪಿ ಜಿಲ್ಲಾ ಅಧ್ಯಕ್ಷ ಅಫ್ವಾನ್ ಬಿ. ಹೂಡೆ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.





