ರಾಜ್ಯದ ಕಾಂಗ್ರೆಸ್ ಸರ್ಕಾರ ಮಂಡಿಸಿದ 2026–27ನೇ ಸಾಲಿನ ಬಜೆಟ್ ಬಡವರು, ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರು ಹಾಗೂ ರೈತರ ಪರವಾಗಿದ್ದು ಜನಸಾಮಾನ್ಯರ ಜೀವನಕ್ಕೆ ನೆರವಾಗುವಂತಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮುಖಂಡರು ಹಾಗೂ ಉಡುಪಿ ನಗರಸಭಾ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ಹೇಳಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವತ್ತೂ ಬಡವರು, ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರು ಮತ್ತು ರೈತರ ಪರ ನಿಂತಿದ್ದು, ಅದನ್ನು ಮತ್ತೊಮ್ಮೆ ಈ ಬಜೆಟ್ ಮೂಲಕ ತೋರಿಸಿಕೊಟ್ಟಿದೆ ಎಂದರು.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಮಂಡಿಸಲಾದ ಬಜೆಟ್ ಸರ್ವರ ಪಾಲಿಗೂ ಸಂತೋಷದಾಯಕವಾಗಿದ್ದು, ಜನಸಾಮಾನ್ಯರು ಮೆಚ್ಚುವಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕರಾವಳಿ ಭಾಗಕ್ಕೆ ಮೆಡಿಕಲ್ ಕಾಲೇಜು ಘೋಷಣೆ ಮಾಡಿರುವುದು, ಮೀನುಗಾರರಿಗೆ ಸಂಪೂರ್ಣ ಬೆಂಬಲ ನೀಡುವ ಕ್ರಮಗಳು ಹಾಗೂ ರೈತರ ಕಷ್ಟ ನಿವಾರಣೆಗೆ ಕೈಗೊಂಡಿರುವ ಯೋಜನೆಗಳು ಈ ಬಜೆಟ್‌ನ ಪ್ರಮುಖ ಅಂಶಗಳಾಗಿವೆ. ಮಧ್ಯಮ ವರ್ಗದವರು ಮತ್ತು ಕೂಲಿ ಕಾರ್ಮಿಕರಿಗೂ ಈ ಬಜೆಟ್ ಸಂತೋಷದಾಯಕವಾಗಿದೆ ಎಂದು ಹೇಳಿದರು.
ಗ್ಯಾರೆಂಟಿ ಯೋಜನೆಗಳ ಮೂಲಕ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದಾಗಿ ಸಂಕಷ್ಟದಲ್ಲಿದ್ದ ರಾಜ್ಯದ ಬಡ ಜನರನ್ನು ಬದುಕಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿದ್ದಾರೆ.





