ಉಡುಪಿ ಜಿಲ್ಲೆಯ ತೋನ್ಸೆ ಹೂಡೆ ಪ್ರದೇಶದಲ್ಲಿ ಸೌಹಾರ್ದ ಮತ್ತು ಸಹಬಾಳ್ವೆಯ ಸುಂದರ ಸಂದೇಶ ಸಾರುವ ಸೌಹಾರ್ದ ಇಫ್ತಾರ್ ಕೂಟ ಈ ವರ್ಷವೂ ಶನಿವಾರ ಹೂಡೆ ಉರ್ದು ಶಾಲೆಯ ಆವರಣದಲ್ಲಿ ಅದ್ಧೂರಿಯಾಗಿ ನಡೆಯಿತು. ಕಳೆದ ಐದು ವರ್ಷಗಳಿಂದ ಸ್ಥಳೀಯ ಯುವಕರು ಒಂದಾಗಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಪ್ರತಿವರ್ಷದಂತೆ ಈ ಬಾರಿಯೂ ಸರ್ವ ಧರ್ಮಿಯರನ್ನು ಸ್ವಾಗತಿಸಿ ಸಹೋದರತ್ವದ ಸಂದೇಶವನ್ನು ಸಾರಿದರು.

ತೋನ್ಸೆ ಹೂಡೆ ಪ್ರದೇಶದ ಯುವಕರು ಸ್ವಯಂಪ್ರೇರಿತವಾಗಿ ಆರಂಭಿಸಿದ ಈ ಸೌಹಾರ್ದ ಇಫ್ತಾರ್ ಕೂಟವು ಕಾಲಕ್ರಮೇಣ ಸ್ಥಳೀಯ ಸಮುದಾಯದ ಒಗ್ಗಟ್ಟಿನ ಪ್ರತೀಕವಾಗಿ ಬೆಳೆಯಿತು. ರಮಝಾನ್ ಮಾಸದ ಉಪವಾಸ ಮುರಿಯುವ ಇಫ್ತಾರ್ ಸಮಯದಲ್ಲಿ ಸರ್ವ ಧರ್ಮಿಯರು ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಪರಸ್ಪರ ಶುಭಾಶಯ ಹಂಚಿಕೊಂಡರು.
ಈದಿನ.ಕಾಮ್ ಜೊತೆ ಮಾತನಾಡಿದ ಉಡುಪಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಟಿ.ಎಂ. ರಹ್ಮತುಲ್ಲಾ, “ಕಳೆದ ಐದು ವರ್ಷಗಳಿಂದ ತೋನ್ಸೆ ಹೂಡೆ ಪ್ರದೇಶದ ಯುವಕರು ಸೇರಿಕೊಂಡು ಈ ಇಫ್ತಾರ್ ಕೂಟವನ್ನು ಆಯೋಜಿಸುತ್ತಾ ಬಂದಿದ್ದೇವೆ. ಇಲ್ಲಿ ಸರ್ವ ಧರ್ಮೀಯರು ಬಂದು ಭಾಗವಹಿಸುವುದು ಈ ಕಾರ್ಯಕ್ರಮದ ವಿಶೇಷತೆ. ತೋನ್ಸೆ ಪರಿಸರವು ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತರು ಎಂಬ ಭೇದವಿಲ್ಲದೆ ಎಲ್ಲರೂ ನಮ್ಮವರು ಎನ್ನುವ ಭಾವನೆಯೊಂದಿಗೆ ಬದುಕು ಸಾಗಿಸುತ್ತಿದ್ದೇವೆ,” ಎಂದು ಹೇಳಿದರು.

ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಹಲವರು, ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಪರಸ್ಪರ ನಂಬಿಕೆ ಮತ್ತು ಸಹಬಾಳ್ವೆಯನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಸಮಾಜದಲ್ಲಿ ಕೆಲವೊಮ್ಮೆ ಕಾಣಿಸಿಕೊಳ್ಳುವ ವಿಭಜನೆಯ ಮನೋಭಾವಕ್ಕೆ ಇಂತಹ ಸೌಹಾರ್ದ ಕೂಟಗಳು ಉತ್ತರವಾಗುತ್ತವೆ ಎಂಬುದನ್ನೂ ಅವರು ಹೇಳಿದರು.

ಸ್ಥಳೀಯ ಯುವಕರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರು, ಸಮಾಜ ಸೇವಕರು ಹಾಗೂ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ಸೌಹಾರ್ದದ ಸಂದೇಶವನ್ನು ಸಾರಿದರು.

ತೋನ್ಸೆ ಹೂಡೆ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ನಡೆಯುತ್ತಿರುವ ಈ ಸೌಹಾರ್ದ ಇಫ್ತಾರ್ ಕೂಟವು, ಧರ್ಮ ಬೇಧಗಳಿಗಿಂತ ಮಾನವೀಯತೆ ದೊಡ್ಡದು ಎಂಬ ಸಂದೇಶವನ್ನು ಸಮಾಜಕ್ಕೆ ನೀಡುವ ಒಂದು ಮಾದರಿ ಕಾರ್ಯಕ್ರಮವಾಗಿ ಗುರುತಿಸಿಕೊಂಡಿದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




