ಮುಸ್ಲಿಂ ಸಮುದಾಯದ ಪವಿತ್ರ ರಮಝಾನ್ ಉಪವಾಸದ ನಂತರ ಆಚರಿಸಲಾಗುವ ಈದುಲ್ ಫಿತ್ರ ಹಬ್ಬದ ಸಂದರ್ಭದಲ್ಲಿ ಶಾಂತಿಯುತ ಮತ್ತು ಸೌಹಾರ್ದಯುತ ವಾತಾವರಣ ಕಾಪಾಡಲು ಅಗತ್ಯ ಪೊಲೀಸ್ ಭದ್ರತೆ ಒದಗಿಸುವಂತೆ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ವೇದಿಕೆ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರಿಗೆ ಮನವಿ ಸಲ್ಲಿಸಿದೆ.
ಈದುಲ್ ಫಿತ್ರ ಹಬ್ಬವನ್ನು ಜಗತ್ತಿನಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ವಿಶೇಷವಾಗಿ ಸಾಮೂಹಿಕ ಪ್ರಾರ್ಥನೆ, ದಾನಧರ್ಮ ಹಾಗೂ ಸಾರ್ವಜನಿಕ ಸೌಹಾರ್ದ ಸಭೆಗಳು ಇದರ ಮುಖ್ಯ ಅಂಶಗಳಾಗಿವೆ. ಹಬ್ಬದ ದಿನ ಮಸೀದಿಗಳು ಮತ್ತು ಈದ್ಗಾ ಮೈದಾನಗಳಲ್ಲಿ ಭಕ್ತರ ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ, ಅಲ್ಲಿ ಸಮರ್ಪಕ ಭದ್ರತಾ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂದು ವೇದಿಕೆ ತಿಳಿಸಿದೆ.
ಹಾಗೂ, ಸಮಾಜದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯುಂಟುಮಾಡುವ ಯಾವುದೇ ಸಮಾಜವಿರೋಧಿ ಅಥವಾ ಧಾರ್ಮಿಕ ವೈಷಮ್ಯ ಸೃಷ್ಟಿಸುವ ಚಟುವಟಿಕೆಗಳ ವಿರುದ್ಧ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ವಿನಂತಿಸಲಾಗಿದೆ. ಪೊಲೀಸ್ ಸಿಬ್ಬಂದಿಯ ಪೆಟ್ರೋಲಿಂಗ್ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಹಾಯಕವಾಗಿದ್ದು, ಹಬ್ಬಗಳು ಶಾಂತಿಯುತವಾಗಿ ನಡೆಯಲು ನೆರವಾಗುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ವೇದಿಕೆ ಜಿಲ್ಲೆಯಲ್ಲಿ ಶಾಂತಿ, ಏಕತೆ ಮತ್ತು ಸೌಹಾರ್ದತೆಯನ್ನು ಕಾಪಾಡುವಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡಲು ಬದ್ಧವಾಗಿರುವುದಾಗಿ ತಿಳಿಸಿದೆ. ಭಾರತದ ಸಂವಿಧಾನದ ವಿಧಿ 25ರ ಅನ್ವಯ ಧಾರ್ಮಿಕ ಸ್ವಾತಂತ್ರ್ಯವನ್ನು ಕಾಪಾಡುವ ಭರವಸೆ ನೀಡಲಾಗಿದೆ.
ಇದೇ ವೇಳೆ, ರಮಝಾನ್ ಈದುಲ್ ಫಿತ್ರ ಜೊತೆಗೆ ಮುಂಬರುವ ಗುಡ್ ಫ್ರೈಡೇ ಹಾಗೂ ಈಸ್ಟರ್ ಹಬ್ಬಗಳ ಸಂದರ್ಭದಲ್ಲಿಯೂ ಅಗತ್ಯ ಪೊಲೀಸ್ ಭದ್ರತೆ ಒದಗಿಸಿ, ಸಂಬಂಧಿತ ಠಾಣೆಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಲಾಗಿದೆ.

ಈದಿನ.ಕಾಮ್ ಜೊತೆ ಮಾತನಾಡಿದ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ವೇದಿಕೆ ಅಧ್ಯಕ್ಷ ಚಾರ್ಲ್ಸ್ ಅಂಬ್ಲರ್, ಮಾರ್ಚ್ 20ರಿಂದ 22ರವರೆಗೆ ಉಡುಪಿಯಲ್ಲಿ ನಡೆಯಲಿರುವ ಕ್ರೈಸ್ತ ಸಮುದಾಯದ ವಾರ್ಷಿಕ ‘ಸಮಾಧಾನ’ ಧಾರ್ಮಿಕ ಕಾರ್ಯಕ್ರಮವನ್ನು ಕ್ರಿಶ್ಚಿಯನ್ ಶಾಲಾ ಮೈದಾನದಲ್ಲಿ ಭಕ್ತರಿಗಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನಡಿ ಇಂತಹ ಕಾರ್ಯಕ್ರಮಗಳು ಸಹಜವೆಂದು ಅವರು ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ರೀತಿಯಲ್ಲಿ ಕೆಲವು ಸಂಘಟನೆಗಳ ಮುಖಂಡರು ನೀಡಿರುವ ಹೇಳಿಕೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಹಿಂಸಾತ್ಮಕ ವಾತಾವರಣ ಸೃಷ್ಟಿಸುವ ಮಾತುಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತವೆ ಎಂದು ಹೇಳಿದರು. ಈ ವಿಷಯವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕ್ರೈಸ್ತ ಸಮುದಾಯದ ಈ ಧಾರ್ಮಿಕ ಕಾರ್ಯಕ್ರಮ ಯಾವುದೇ ಅಡಚಣೆ ಇಲ್ಲದೆ ಶಾಂತಿಯುತವಾಗಿ ನಡೆಯುವಂತೆ ಜಿಲ್ಲಾಡಳಿತ ತನ್ನ ಸಂವಿಧಾನಬದ್ಧ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಅವರು ಆಗ್ರಹಿಸಿದರು.





