ಕರಾವಳಿ ಜಿಲ್ಲೆಯ ಕಡಲ ತೀರಗಳು ಪ್ರವಾಸಿಗರಿಗೆ ಸದಾ ಆಕರ್ಷಣೆಯ ತಾಣ. ಸಮುದ್ರದ ಅಲೆಗಳ ಶಬ್ದ, ನೀಲಿಯ ಆಕಾಶ, ಬೋಟಿನ ಮೆಲ್ಲನೆ ಸಾಗುವ ಪ್ರಯಾಣ ಇವೆಲ್ಲವೂ ದಿನನಿತ್ಯದ ಒತ್ತಡದಿಂದ ಮುಕ್ತಿ ನೀಡುವ ಅನುಭವ. ಆದರೆ ಈ ಸೌಂದರ್ಯ, ಕ್ಷಣಿಕ ಅಜಾಗರೂಕತೆಯಿಂದಲೇ ಪ್ರಾಣಾಪಾಯವಾಗಬಹುದು ಎಂಬ ಕಟು ಸತ್ಯವನ್ನು ಉಡುಪಿಯ ಕೋಡಿಬೆಂಗ್ರೆ ದುರಂತ ಮತ್ತೆ ನೆನಪಿಸಿದೆ. ಸೂಚನಾ ಫಲಕಗಳಿದ್ದರೂ ಕೆಲವೊಮ್ಮೆ ಜನ ಕೇರ್ ಮಾಡುವುದೇ ಇಲ್ಲ. ಕಡಲ ತೀರದಲ್ಲಿ ಸಂಭವಿಸುವ ದುರಂತಗಳಿಗೆ ಸಂಪೂರ್ಣ ಬ್ರೇಕ್ ಹಾಕಲು ಇದೀಗ ಉಡುಪಿ ಜಿಲ್ಲಾಡಳಿತ ಮುಂದಾಗಿದೆ. ಕೋಡಿಬೆಂಗ್ರೆ ದುರಂತದ ಬಳಿಕ ಡಿಸಿ ಸ್ವರೂಪ ಅವರು, ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಡಿ ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಬೆಂಗ್ರೆ ಬೀಚ್ ಸಮೀಪದ ನದಿ–ಸಮುದ್ರ ಸೇರುವ ಅಳಿವೆಬಾಗಿಲಿನಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಪ್ರವಾಸಿ ದೋಣಿ ದುರಂತದಲ್ಲಿ ಮೂವರು ಯುವ ಜೀವಗಳು ಕಳೆದುಹೋಗಿವೆ. ಗಂಭೀರವಾಗಿ ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿಶಾ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಈ ಮೊದಲು ಅಪಘಾತದಲ್ಲಿ ಚಾಮರಾಜನಗರ ಜಿಲ್ಲೆಯ ಹರವೆ ಗ್ರಾಮದ ಶಂಕರಪ್ಪ ಹಾಗೂ ನರಸೀಪುರ ತಾಲೂಕಿನ ಮೂಗೂರು ನಿವಾಸಿ ಸಿಂಧು ಮೃತಪಟ್ಟಿದ್ದರು. ಮತ್ತೊಬ್ಬ ಗಾಯಾಳು ಧರ್ಮರಾಜ ಅವರ ಸ್ಥಿತಿ ಸದ್ಯ ಸ್ಥಿರವಾಗಿದೆ. ಮೃತರು ಮತ್ತು ಗಾಯಾಳುಗಳು ಎಲ್ಲರೂ ಮೈಸೂರಿನ ಖಾಸಗಿ ಬಿಪಿಒ ಕಾಲ್ ಸೆಂಟರ್‌ನಲ್ಲಿ ಉದ್ಯೋಗದಲ್ಲಿದ್ದು, ಪ್ರವಾಸದ ನೆನಪುಗಳೊಂದಿಗೆ ಮನೆಗೆ ಮರಳಬೇಕಿದ್ದವರು ಆದರೆ ಮರಳಿದ್ದು ಮೌನವಾಗಿ.
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಪ್ರತ್ಯಕ್ಷದರ್ಶಿ ಹಾಗೂ ರಕ್ಷಣಾ ಕಾರ್ಯದಲ್ಲಿ ನಿರತರಾದ ನಾಗರಾಜ್ ಕೋಡಿಬೆಂಗ್ರೆ, ದುರಂತದ ವಿಷಯ ತಿಳಿದ ತಕ್ಷಣವೇ ನಾವು ಸ್ಥಳಕ್ಕೆ ಧಾವಿಸಿದ್ದೆವು. ಸ್ಥಳದಲ್ಲಿ ಲಭ್ಯವಿದ್ದ ದೋಣಿಯನ್ನು ಬಳಸಿಕೊಂಡು ನೀರಿಗೆ ಬಿದ್ದಿದ್ದವರನ್ನು ದೋಣಿಗೆತ್ತಿಕೊಂಡು ಸುರಕ್ಷಿತವಾಗಿ ದಡಕ್ಕೆ ಕರೆತಂದು ರಕ್ಷಣೆ ಮಾಡಿದೆವು. ದೋಣಿಯಲ್ಲಿದ್ದ ಎಲ್ಲರೂ ಒಂದೇ ಭಾಗಕ್ಕೆ ಹೋಗಿ ಕೂತಿದ್ದರಿಂದ ಸಮತೋಲನ ಕಳೆದುಕೊಂಡು, ಒಬ್ಬರ ಮೇಲೊಬ್ಬರು ಬಿದ್ದ ಪರಿಣಾಮ ದೋಣಿ ಪಲ್ಟಿಯಾಗಿದೆ. ಇದರಿಂದ ಅಪಘಾತವಾಗಿರಬಹುದು. ದೋಣಿ ಸಾಗಣೆಗೆ ಸಮತೋಲನ ಅತ್ಯಂತ ಅಗತ್ಯವಾಗಿದ್ದು, ಸಮತೋಲನ ತಪ್ಪಿದರೆ ದೋಣಿ ಉರುಳುವ ಅಪಾಯ ಹೆಚ್ಚಿರುತ್ತದೆ. ಮೊನ್ನೆ ನಡೆದ ದುರಂತವೂ ಅದೇ ಕಾರಣದಿಂದ ಸಂಭವಿಸಿದೆ” ಎಂದು ತಿಳಿಸಿದರು.

ನಮ್ಮಿಂದ ಸಾಧ್ಯವಾದ ಮಟ್ಟಿಗೆ ರಕ್ಷಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಲಾಯಿತು. ನಂತರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ನಾವು ಈ ಪ್ರದೇಶದ ಸ್ಥಳೀಯರಾಗಿದ್ದು, ಹಲವು ವರ್ಷಗಳ ಅನುಭವ ಹೊಂದಿದ್ದೇವೆ, ಕತ್ತಲೆ ಬಳಿಕ ಇಲ್ಲಿ ನಿಲ್ಲಬೇಡಿ, ಈ ಭಾಗದಲ್ಲಿ ನೀರಿನ ಆಳ ಹೆಚ್ಚಿರುವುದರಿಂದ ಈಜಬೇಡಿ ಎಂದು ಎಚ್ಚರಿಸುವ ಸೂಚನಾ ಫಲಕಗಳನ್ನು ಅಳವಡಿಸಿದ್ದರೂ ಜನರು ಗಮನಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನೀರಿನ ಸೆಳೆತ ಯಾವಾಗ ಹೆಚ್ಚಾಗುತ್ತದೆ ಎಂಬುದು ಯಾರಿಗೂ ಮುಂಚಿತವಾಗಿ ತಿಳಿಯುವುದಿಲ್ಲ ಎಂದರು.

ಇಲ್ಲಿವರೆಗೆ ದೋಣಿಗೆ ಸಂಬಂಧಿಸಿದ ಇಂತಹ ದೊಡ್ಡ ಅಪಘಾತಗಳು ಸಂಭವಿಸಿರಲಿಲ್ಲ. ಸಾಮಾನ್ಯವಾಗಿ ಎಲ್ಲರೂ ಎಚ್ಚರಿಕೆಯಿಂದಲೇ ಇರುತ್ತಾರೆ. ಆದರೆ ಸಂಭವಿಸಬಾರದ ದುರಂತ ನಡೆದಿದ್ದು, ಇನ್ನು ಮುಂದಾದರೂ ಸಾರ್ವಜನಿಕರು ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಅವರು ಮನವಿ ಮಾಡಿದರು.

ಈ ದಿನ.ಕಾಮ್ ಜೊತೆ ಮಾತನಾಡಿದ ಸ್ಥಳೀಯರು ಹಾಗೂ ಪ್ರತ್ಯಕ್ಷದರ್ಶಿ ಜಗದೀಶ್ ಕೋಡಿಬೆಂಗ್ರೆ, “ದೋಣಿಯಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ದರು ಎಂಬುದು ತಮಗೆ ನಿಖರವಾಗಿ ತಿಳಿದಿಲ್ಲ. ಘಟನೆ ಸಂಭವಿಸುವ ವೇಳೆ ನಾನು ಮೀನು ಹಿಡಿಯುವ ಕಾರ್ಯದಲ್ಲಿ ನಿರತನಾಗಿದ್ದೆ. ದೋಣಿಯಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕೂರಿಸಿದ್ದರಿಂದಲೇ ಈ ಅಪಘಾತ ಸಂಭವಿಸಿರಬಹುದು ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದರು. ಸಾಮಾನ್ಯವಾಗಿ ಈ ಭಾಗಕ್ಕೆ ಪ್ರತಿದಿನವೂ ಪ್ರವಾಸಿಗರು ಬರುತ್ತಾರೆ. ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರೆ ಈ ರೀತಿಯ ಅಪಘಾತವನ್ನು ತಪ್ಪಿಸಬಹುದಿತ್ತು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮತ್ತೊಬ್ಬ ಪ್ರತ್ಯಕ್ಷದರ್ಶಿ ಹಾಗೂ ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿಯ ತರಬೇತುದಾರ ಸಲೀಮ್ ಮಲ್ಪೆ ಅವರು, “ವಿಷಯ ತಿಳಿದ ಕೂಡಲೇ ನಾನು ಸ್ಥಳಕ್ಕೆ ಧಾವಿಸಿದೆ ಆದರೆ ನಾನು ತಲುಪುವಷ್ಟರಲ್ಲಿ ಎಲ್ಲರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು” ಎಂದು ಹೇಳಿದರು.
ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಎಷ್ಟೇ ಎಚ್ಚರಿಕೆ ನೀಡಿದರೂ ಕೆಲವರು ಲೈಫ್ ಜಾಕೆಟ್ ಧರಿಸುವುದಿಲ್ಲ. ನೀರನ್ನು ಕಂಡ ತಕ್ಷಣವೇ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಸಮುದ್ರಕ್ಕೆ ಇಳಿಯುತ್ತಾರೆ. ಹೆಚ್ಚಿನವರು ಹೊರ ಊರಿನವರಾಗಿರುವುದರಿಂದ ಸಮುದ್ರದ ಆಳ–ಅಗಲ ಹಾಗೂ ಅಪಾಯಗಳ ಬಗ್ಗೆ ಅರಿವು ಇರುವುದಿಲ್ಲ. ಇಂತಹ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಲೈಫ್ ಗಾರ್ಡ್‌ಗಳ ನಿಯೋಜನೆ ಅಗತ್ಯವಿದೆ ಎಂದು ಹೇಳಿದರು.
ಈ ದುರ್ಘಟನೆಯ ನಂತರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆಗಳನ್ನು ಹೊರಡಿಸಿದೆ.

ನಗರದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಡಲ ತೀರ ಭದ್ರತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, “ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಬೋಟುಗಳ ಮೂಲಕ ಕಡಲಲ್ಲಿ ವಿಹರಿಸುವುದು ಸಾಮಾನ್ಯ. ಆದರೆ ಇನ್ನು ಮುಂದೆ ಜಿಲ್ಲೆಯ ಯಾವುದೇ ಪ್ರವಾಸಿ ಬೋಟ್‌ಗಳು ಬಂದರು, ಪೊಲೀಸ್, ಕರಾವಳಿ ಕಾವಲು ಪಡೆ, ಸ್ಥಳೀಯ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯದೇ ಸಮುದ್ರಕ್ಕೆ ಇಳಿಯಲು ಅವಕಾಶವಿಲ್ಲ. ಜಿಲ್ಲೆಯಲ್ಲಿರುವ ಎಲ್ಲಾ ಪ್ರವಾಸಿ ಬೋಟುಗಳು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ 45 ದಿನಗಳ ಒಳಗಾಗಿ ಕಡ್ಡಾಯವಾಗಿ ಪ್ರವಾಸೋದ್ಯಮ ಇಲಾಖೆಯಿಂದ ನೋಂದಣಿ ಮಾಡಿಕೊಳ್ಳಬೇಕು. ಅನುಮತಿ ಇಲ್ಲದ ಬೋಟುಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಪ್ರವಾಸಿಗರ ಜೀವ ರಕ್ಷಣೆಗೆ ಲೈಫ್ ಜಾಕೆಟ್ ಧರಿಸುವುದನ್ನು ಗಂಭೀರವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. “ಪ್ರತಿಯೊಬ್ಬ ಪ್ರವಾಸಿಗರು ಕಡಲಿಗೆ ಇಳಿಯುವ ಮೊದಲು ಲೈಫ್ ಜಾಕೆಟ್ ಧರಿಸಲೇಬೇಕು. ಎಲ್ಲರೂ ಲೈಫ್ ಜಾಕೆಟ್ ಧರಿಸಿದ್ದಲ್ಲಿ ಮಾತ್ರ ಬೋಟ್ ಮುಂದೆ ಸಾಗಲಿದೆ ಎಂಬ ಪ್ರೀ-ರೆಕಾರ್ಡೆಡ್ ಆಡಿಯೋ ಬೋಟುಗಳಲ್ಲಿ ಕಡ್ಡಾಯವಾಗಿ ಇರಬೇಕು” ಎಂದು ಅವರು ಹೇಳಿದರು. ಜೊತೆಗೆ, ಲೈಫ್ ಜಾಕೆಟ್ ಬಳಕೆಯ ಮಹತ್ವದ ಕುರಿತು ಕರಪತ್ರಗಳು ಮತ್ತು ಸೂಚನಾ ಫಲಕಗಳನ್ನು ಕಡಲ ತೀರಗಳಲ್ಲಿ ಹಾಗೂ ಪ್ರವಾಸಿಗರು ಹೆಚ್ಚಾಗಿ ಸೇರುವ ಸ್ಥಳಗಳಲ್ಲಿ ಪ್ರದರ್ಶಿಸಲು ಸೂಚಿಸಿದರು.

ಕೋಡಿಬೆಂಗ್ರೆ ಬೋಟ್ ದುರಂತ ಪ್ರಕರಣದ ಬಳಿಕ ಲೈಫ್ ಜಾಕೆಟ್ ಧರಿಸುವುದು ಕಡ್ಡಾಯ ಎಂದು ಉಡುಪಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಆದರೆ ದುರ್ಘಟನೆ ನಡೆದ ಗಣರಾಜ್ಯೋತ್ಸವದ ದಿನವೇ ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ ನೆರವೇರಿಸಲು ಬೋಟ್‌ನಲ್ಲಿ ತೆರಳಿದ್ದ ಡಿಸಿ, ಉಸ್ತುವಾರಿ ಸಚಿವರು ಸಹಿತ ಅಧಿಕಾರಿಗಳೂ ಲೈಫ್ ಜಾಕೆಟ್ ಧರಿಸದೆ ಬೋಟ್ ನಲ್ಲಿ ಪ್ರಯಾಣಿಸಿರುವ ವಿಡಿಯೋ ಒಂದು ವೈರಲ್ ಆಗಿದೆ. ಅಧಿಕಾರಿಗಳೇ ಹೀಗೆ ನಡೆದುಕೊಂಡರೆ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕವಲಯದಲ್ಲಿ ಕೇಳಿಬಂದಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಡಿಸಿ ಸೇರಿ ಇತರ ಅಧಿಕಾರಿಗಳು ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.


ಪ್ರವಾಸಿ ಬೋಟ್ ಮಾಲೀಕರು ಹಾಗೂ ಬೋಟ್ ಚಾಲಕರಿಗೆ ಕಾರ್ಯಾಗಾರಗಳನ್ನು ಆಯೋಜಿಸಿ, ಸುರಕ್ಷತಾ ಕ್ರಮಗಳು, ವಿಮೆ ಸೌಲಭ್ಯ ಮತ್ತು ತುರ್ತು ಪರಿಸ್ಥಿತಿಯಲ್ಲಿ ಜೀವ ರಕ್ಷಣಾ ವಿಧಾನಗಳ ಕುರಿತು ತರಬೇತಿ ನೀಡಲಾಗುವುದು. ಜೀವ ರಕ್ಷಕ ಸಿಬ್ಬಂದಿಗಳು ಕೂಡ ಸಮರ್ಪಕ ತರಬೇತಿ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.


ಕೋಡಿಬೆಂಗ್ರೆ ದೋಣಿ ದುರಂತವು ಪ್ರವಾಸದ ಹೆಸರಿನಲ್ಲಿ ನಡೆಯುವ ಅಜಾಗರೂಕತೆಗೆ ಭಾರೀ ಬೆಲೆ ಕಟ್ಟಬೇಕಾಗುತ್ತದೆ ಎಂಬುದನ್ನು ನೋವಿನಿಂದಲೇ ನೆನಪಿಸಿದೆ. ಕಳೆದುಕೊಂಡ ಜೀವಗಳನ್ನು ಮರಳಿ ತರಲು ಸಾಧ್ಯವಿಲ್ಲ, ಆದರೆ ಇಂತಹ ದುರ್ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಿಲ್ಲಾಡಳಿತ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳು ಪರಿಣಾಮಕಾರಿಯಾಗಿ ಜಾರಿಯಾದರೆ ಮಾತ್ರ ಅವುಗಳ ಅರ್ಥ ಸಾರ್ಥಕವಾಗಲಿದೆ.


ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




