2026-27ರ ರಾಜ್ಯ ಬಜೆಟ್‌ನಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾದ ನಿಧಿಯನ್ನು ಇತರ ಯೋಜನೆಗಳಿಗೆ ಬಳಸುತ್ತಿರುವ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ), ಸಿಐಟಿಯು ವತಿಯಿಂದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಬಜೆಟ್‌ನಲ್ಲಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯ, ಪಿಂಚಣಿ, ವೈದ್ಯಕೀಯ ವೆಚ್ಚ ಹಾಗೂ ಅಪಘಾತ ಪರಿಹಾರಕ್ಕೆ ಮೀಸಲಾದ ನಿಧಿಯಿಂದ 60 ಕೋಟಿ ರೂ ವೆಚ್ಚದಲ್ಲಿ 10 ಜಿಟಿಟಿಸಿ ತರಬೇತಿ ಕೇಂದ್ರಗಳು, 104 ಶ್ರಮಿಕ ವಸತಿ ಶಾಲೆಗಳು ಹಾಗೂ 200 ಕೋಟಿ ರೂ ವೆಚ್ಚದಲ್ಲಿ ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆಗೆ ಹಣ ವಿನಿಯೋಗಿಸಿರುವುದರಿಂದ ಕಾರ್ಮಿಕರ ಮೂಲಭೂತ ಸೌಲಭ್ಯಗಳಿಗೆ ಕೊರತೆ ಉಂಟಾಗುತ್ತದೆ ಎಂದು ಸಂಘದವರು ಆಕ್ಷೇಪ ವ್ಯಕ್ತಪಡಿಸಿದರು. ಜೊತೆಗೆ, ಕರ್ನಾಟಕದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಪುನರ್ ಸ್ಥಾಪಿಸಿ ರದ್ದಾಗದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮನವಿಗೆ ಸ್ಪಂದಿಸಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು, ವಿಧಾನಸಭಾ ಅಧಿವೇಶನದ ಶೂನ್ಯಾವಧಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಕಟ್ಟಡ ಕಾರ್ಮಿಕರ ನಿಧಿಯನ್ನು ಅವರ ಕಲ್ಯಾಣಕ್ಕಾಗಿ ಮಾತ್ರ ಬಳಸುವಂತೆ ಆಗ್ರಹಿಸುವುದಾಗಿ ತಿಳಿಸಿದರು. ಹಾಗೆಯೇ 62-63 ವರ್ಷ ವಯಸ್ಸಿನ ಕಟ್ಟಡ ಕಾರ್ಮಿಕರ ತಿರಸ್ಕರಿಸಲ್ಪಟ್ಟ ಪಿಂಚಣಿ ಅರ್ಜಿಗಳ ಕುರಿತು ಸಹ ಚರ್ಚಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಇದೇ ವೇಳೆ, 2024-25 ಮತ್ತು 2025-26 ಸಾಲಿನ ಎರಡು ವರ್ಷಗಳಿಂದ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಬಾಕಿ ಉಳಿದಿರುವ ವಿಚಾರಕ್ಕೂ ಗಮನ ಸೆಳೆಯಲಾಯಿತು.
ಬೇಡಿಕೆಗಳು ಈಡೇರದಿದ್ದಲ್ಲಿ ಏಪ್ರಿಲ್ 20ರಂದು ಬೆಂಗಳೂರು ಕಲ್ಯಾಣ ಮಂಡಳಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಸಂಘದ ಅಧ್ಯಕ್ಷ ಚಿಕ್ಕ ಮೊಗವೀರ ಗಂಗೊಳ್ಳಿ, ಕೋಶಾಧಿಕಾರಿ ಚಂದ್ರಶೇಖರ್ ವಿ, ವಸಂತ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





